ADVERTISEMENT

ತ್ರಿವಳಿ ತಲಾಖ್; ರಾಜ್ಯದಲ್ಲಿ ಮೊದಲ ಎಫ್‌ಐಆರ್‌

ಅಂಚೆ ಮೂಲಕ ‘ತಲಾಖ್’ ಕೊಟ್ಟ ಪತಿ; ಠಾಣೆ ಮೆಟ್ಟಿಲೇರಿದ ಪತ್ನಿ

ಸಂತೋಷ ಜಿಗಳಿಕೊಪ್ಪ
Published 23 ಆಗಸ್ಟ್ 2019, 19:45 IST
Last Updated 23 ಆಗಸ್ಟ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ತ್ರಿವಳಿ ತಲಾಖ್‌’ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿದೆ.

‘ಪತಿ ಇಸ್ಮಾಯಿಲ್ ಖಾನ್ ಪಠಾಣ ಕಾನೂನುಬಾಹಿರವಾಗಿ ನನಗೆ ವಿವಾಹ ವಿಚ್ಛೇದನ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಯಕ್ಕುಂಡಿಯ ಬೀಬಿ ಆಯೀಶಾ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಇಸ್ಮಾಯಿಲ್ ಖಾನ್ ಹಾಗೂ ಇತರರ ವಿರುದ್ಧ ‘ತ್ರಿವಳಿ ತಲಾಖ್‌ ಪದ್ಧತಿ ನಿಷೇಧ’ ಕಾಯ್ದೆಯ ಸೆಕ್ಷನ್ 4ರಡಿ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ತ್ರಿವಳಿ ತಲಾಖ್‌ ನಿಷೇಧ’ ಕಾಯ್ದೆ ಜಾರಿಯಾಗಿದೆ. ಕಾಯ್ದೆ ಜಾರಿ ಬಗ್ಗೆ ಜುಲೈ 31ರಂದು ಗೆಜೆಟ್‌ ಪ್ರಕಟಣೆ ಹೊರಡಿಸಲಾಗಿದೆ.

ADVERTISEMENT

ಅಂಚೆ ಮೂಲಕ ‘ತಲಾಖ್’ ಕೊಟ್ಟ: ‘ಗೋವಾದ ಇಸ್ಮಾಯಿಲ್‌ಖಾನ್‌ಗೆ ನನ್ನನ್ನು ಮದುವೆ ಮಾಡಿಕೊಡಲಾಗಿತ್ತು. ಆನಂತರ, ನಾನು ಗೋವಾಗೆ ಹೋಗಿ ಪತಿ ಜೊತೆ ವಾಸವಿದ್ದೆ. 10 ತಿಂಗಳ ನಂತರ ನನಗೆ ಯಾವುದೋ ಕಾಯಿಲೆ ಇರುವುದಾಗಿ ಹೇಳಿದ್ದ ಪತಿ, ತವರಿಗೆ ಹೋಗಿ ವೈದ್ಯರ ಬಳಿ ತೋರಿಸಿಕೊಂಡು ಬಾ ಎಂದಿದ್ದರು’ ಎಂದು ದೂರಿನಲ್ಲಿಬೀಬಿ ಆಯೀಶಾ ತಿಳಿಸಿದ್ದಾರೆ.

‘ತವರು ಮನೆಯಲ್ಲಿ ವಾಸವಿದ್ದೆ. ಹಲವು ವೈದ್ಯರ ಬಳಿ ತೋರಿಸಿದಾಗ, ಯಾವುದೇ ಕಾಯಿಲೆ ಇಲ್ಲವೆಂದು ಹೇಳಿದರು. ನನ್ನನ್ನು ಗೋವಾಗೆ ಕರೆದೊಯ್ಯುವಂತೆ ತಂದೆ–ತಾಯಿ ಹಾಗೂ ಹಿರಿಯರು, ಪತಿಗೆ ಹೇಳಿದ್ದರು. ಅದಕ್ಕೆ ಒಪ್ಪದ ಪತಿ, ‘ನಿನಗೆ ಕಾಯಿಲೆ ಇದೆ. ವಿಚ್ಛೇದನ ನೀಡುತ್ತೇನೆ’ ಎಂದಿದ್ದರು.’

‘ಇದರ ಮಧ್ಯೆಯೇ ಪತಿ, 2019ರ ಫೆಬ್ರುವರಿ 22ರಂದು ನೋಂದಾಯಿತ ಅಂಚೆ ಮೂಲಕ ‘ತಲಾಖ್–ಎ–ಬಿನ್’ ಕಳುಹಿಸಿದ್ದಾರೆ. ವೈವಾಹಿಕ ಕಾರಣ ಹೊಂದಾಣಿಕೆ ಆಗದಿದ್ದರಿಂದ ತಲಾಖ್ ನೀಡುತ್ತಿರುವುದಾಗಿ ಹೇಳಿರುವ ಪತಿ, ಮಹರ್ ಮತ್ತು ಇದ್ದತ್ ಅವಧಿಯ ಮೊತ್ತ ಸೇರಿ ₹ 17,786 ಡಿ.ಡಿ. ಮುಖಾಂತರ ಕಳುಹಿಸಿರುವುದಾಗಿಯೂ ತಿಳಿಸಿದ್ದಾರೆ. ಈ ಬಗ್ಗೆ ವಕೀಲರನ್ನು ವಿಚಾರಿಸಿದಾಗ, ಇದು ಕಾನೂನುಬಾಹಿರ ವಿಚ್ಛೇದನ ಎಂದು ತಿಳಿಸಿರುತ್ತಾರೆ’ ಎಂದು ದೂರಿನಲ್ಲಿ ಬೀಬಿ ಆಯೀಶಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.