ADVERTISEMENT

ಅರಣ್ಯವಾಸಿಗಳ ಗೋಳಿನ ಕಥೆಯಲ್ಲಿ ಸಚಿವರು ಭಾಗಿ

ಸಂಪುಟ ಸಭೆಯಲ್ಲಿ ಗೋಳು ಚರ್ಚಿಸಿ ಎಂದ ಸಿ.ಎಂ.ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 17:38 IST
Last Updated 11 ಜುಲೈ 2018, 17:38 IST
ವಿಧಾನಪರಿಷತ್ತಿನಲ್ಲಿ ಮಾತನಾಡಿದ ತಾರಾ ಅನೂರಾಧ
ವಿಧಾನಪರಿಷತ್ತಿನಲ್ಲಿ ಮಾತನಾಡಿದ ತಾರಾ ಅನೂರಾಧ   

ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ನಿವಾಸಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೆಲವು ಸಚಿವರು ವಿಧಾನಪರಿಷತ್ತಿನಲ್ಲಿ ಅಸಹಾಯಕರಂತೆ ಅಳಲು ಹೇಳಿಕೊಂಡರು. ಮೇಲ್ಮನೆಯ ಇತರ ಸದಸ್ಯರು ಇದಕ್ಕೆ ತಿಳಿ ಹಾಸ್ಯಭರಿತ ಮಾತುಗಳ ಮೂಲಕವೇ ಮಂತ್ರಿಗಳ ಬಾಯಿ ಮುಚ್ಚಿಸಿದರು.

ವಿಧಾನಪರಿಷತ್ತಿನಲ್ಲಿ ಬಿಜೆಪಿ ತಾರಾ ಅನೂರಾಧ ಅವರ ಗಮನ ಸೆಳೆಯುವ ಸೂಚನೆಗೆ ಅರಣ್ಯ ಸಚಿವ ಆರ್.ಶಂಕರ್‌ ಉತ್ತರಿಸುವಾಗ, ಸಭಾನಾಯಕಿ ಜಯಮಾಲಾ, ಸಚಿವರಾದ ಎನ್‌. ಮಹೇಶ್‌, ಪುಟ್ಟರಂಗಶೆಟ್ಟಿ ಆದಿವಾಸಿಗಳ ಸ್ಥಿತಿಗತಿಯ ಬಗ್ಗೆ ಅಳಲು ತೋಡಿಕೊಂಡರು.

ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ, ‘ನೀವು ಕ್ಯಾಬಿನೆಟ್‌ನಲ್ಲಿ ಕುಳಿತು ಈ ವಿಷಯಗಳ ಬಗ್ಗೆ ಮಾತನಾಡಿಕೊಳ್ಳಿ. ಸಮಸ್ಯೆ ಬಗೆಹರಿಸಿ, ಇಲ್ಲಿ ನಮಗೆ ಮಾತನಾಡಲು ಅವಕಾಶ ನೀಡಿ’ ಎಂದರು.

ADVERTISEMENT

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ನೀವು ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಕುಳಿತು, ಮಾತನಾಡಿಕೊಳ್ಳಿ. ಇಲ್ಲಿ ದೂರು ಹೇಳಿಕೊಳ್ಳುವುದು ಬೇಡ’ ಎಂದರು. ಸಭಾನಾಯಕಿ ಜಯಮಾಲ ಹೇಳಿದ್ದು ಇಷ್ಟು, ‘ಪಾಪ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನರಿಗೆ ತುಂಬಾ ಸಮಸ್ಯೆ ಇದೆ. ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಬಾರದು ಎಂದರೆ ಹೇಗೆ. ಇದೆಲ್ಲಾ ಗ್ಲೋಬಲೈಸೇಷನ್ ಪರಿಣಾಮ’ ಎಂದರು.

ವಿಷಯ ಪ್ರಸ್ತಾಪಿಸಿದ ತಾರಾ, ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇವರಲ್ಲಿ ಯಾರಾದರೂ ಸತ್ತರೆ ಮಣ್ಣು ಮಾಡಲು ಬಿಡದ ಸ್ಥಿತಿ ಉದ್ಭವಿಸಿದೆ ಎಂದು ಅವರು ಹೇಳಿದರು.

ಅರಣ್ಯಾಧಿಕಾರಿಗಳು ಕಾಡಿನಲ್ಲೇ ವಾಸ ಮಾಡಲಿ:
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಗರ ಪ್ರದೇಶಗಳಲ್ಲೇ ವಾಸ ಮಾಡುತ್ತಾರೆ. ಅರಣ್ಯಕ್ಕೆ ಹೊಂದಿಕೊಂಡಂತೆ ವಸತಿಗೃಹ ಮತ್ತು ಸೌಲಭ್ಯಗಳಿದ್ದರೂ ಅವರು ವಾಸ ಮಾಡುವುದಿಲ್ಲ ಎಂದು ತಾರಾ ದೂರಿದರು.

‘ಗಂಧದಗುಡಿ’ ಸಿನಿಮಾದಲ್ಲಿ ಅರಣ್ಯ ಅಧಿಕಾರಿಯಾಗಿ ಡಾ.ರಾಜ್‌ಕುಮಾರ್‌ ಅರಣ್ಯದಲ್ಲೇ ವಾಸ ಮಾಡಿದ್ದ ಸನ್ನಿವೇಶ ನೋಡಿದ್ದೇವೆ. ಎಲ್ಲ ಅರಣ್ಯಾಧಿಕಾರಿಗಳೂ ಇದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಅರಣ್ಯದ ಸಮೀಪದಲ್ಲೇ ವಾಸ್ತವ್ಯ ಹೂಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.