
ಬೆಂಗಳೂರು: ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ರಚಿಸಿರುವ ಅಧ್ಯಯನ ಸಮಿತಿಯ ಸದಸ್ಯರು ಆಂಧ್ರ ಪ್ರದೇಶದಲ್ಲಿ ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಿಸಿದರು.
ಆಂಧ್ರ ಪ್ರದೇಶದ ವಿವಿಧ ಇಲಾಖೆಗಳ ಪ್ರತಿನಿಧಿಗಳೊಂದಿಗೆ ಜ.19 ಮತ್ತು 20ರಂದು ಮಾತುಕತೆ ನಡೆಸಿದ ಅಧ್ಯಯನ ಸಮಿತಿ, ತುಳು ಭಾಷೆಯನ್ನು ಅಧಿಕೃತಗೊಳಿಸಲು ರೂಪಿಸಬೇಕಾದ ಕಾನೂನು ಪ್ರಕ್ರಿಯೆ ಹಾಗೂ ಅನುಷ್ಠಾನದ ವಿಧಿವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ ಗಾಯತ್ರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರೊಂದಿಗೆ ಅಧ್ಯಯನ ಸಮಿತಿ ಏಳು ಸದಸ್ಯರು ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಹಾಗೂ ಎನ್‌ಟಿಆರ್ ಜಿಲ್ಲೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
‘ಉರ್ದುವನ್ನು ಆಂಧ್ರ ಪ್ರದೇಶದಲ್ಲಿ ಹೆಚ್ಚುವರಿ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ಉರ್ದು ಬೆಳವಣಿಗೆಗೆ ಸಹಕಾರಿಯಾಗಿದೆ. ತುಳುವನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ನಿಲುವು ಅತ್ಯಂತ ಶ್ಲಾಘನೀಯವಾದುದು’ ಎಂದು ಆಂಧ್ರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರು ಈ ವೇಳೆ ಅಭಿಪ್ರಾಯಪಟ್ಟರು.
ಸಭಾಧ್ಯಕ್ಷರ ಕಚೇರಿ, ಆಂಧ್ರ ಪ್ರದೇಶ ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ, ಉರ್ದು ಅಕಾಡೆಮಿ ಅಧ್ಯಕ್ಷ, ಉರ್ದು ಭಾಷಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನು ಭೇಟಿ ಮಾಡಿದ ಅಧ್ಯಯನ ಸಮಿತಿ ಸದಸ್ಯರು ಮಾಹಿತಿ ಪಡೆದರು.
ಅಮರಾವತಿ ಮಹಾನಗರ ಪಾಲಿಕೆಯ ವಲಯ ಆಯುಕ್ತ, ಸ್ಥಳೀಯ ಪೊಲೀಸ್ ಠಾಣೆ, ಉರ್ದು ಮಾಧ್ಯಮ ಶಾಲೆ, ಇಂಗ್ಲಿಷ್ ಮಾಧ್ಯಮ ಶಾಲೆ, ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಎನ್‌ಟಿಆರ್ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಶ ಅವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಯಿತು.
‘ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ತೆಲುಗು ಭಾಷಾ ಅಭಿವೃದ್ಧಿಗೆ ಯಾವುದೇ ತೊಡಕುಗಳು ಆಗಿಲ್ಲ’ ಎಂದು ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತ್ರಿವಿಕ್ರಮ್ ರಾವ್ ತಂಡಕ್ಕೆ ವಿವರಿಸಿದರು.
ರಾಜ್ಯದ ಅಧ್ಯಯನ ಸಮಿತಿಯಲ್ಲಿ ಕಾನೂನು ಇಲಾಖೆಯ ಉಪ ಕಾರ್ಯದರ್ಶಿ ವನಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪ ಕಾರ್ಯದರ್ಶಿ ಕೆ.ಎನ್. ಮೂರ್ತಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪ ಕಾರ್ಯದರ್ಶಿ ಕೆ.ಎಂ. ಶುಭಶ್ರೀ, ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ ಶೆಟ್ಟಿ, ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ.ಲಿಂಗಪ್ಪ ಗೋನಾಳ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.