ಬೆಂಗಳೂರು: ಕನ್ನಡ ಮತ್ತು ಮಲಯಾಳ ಭಾಷೆಗಳ ಲಿಪಿಯನ್ನು ತುಳು ಭಾಷೆಯ ಲಿಪಿಗೆ ಬದಲಾಯಿಸುವ ಗೇನಸಿರಿ ಎಂಬ ಲಿಪಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಸಚಿವ ಸುನೀಲ್ ಕುಮಾರ್ ಈ ತಂತ್ರಾಂಶ ಬಿಡುಗಡೆ ಮಾಡಿದ್ದಾರೆ ಎಂದು ಜೈ ತುಳುನಾಡು ಸಂಘಟನೆ ತಿಳಿಸಿದೆ.
ಸದ್ಯ ಕನ್ನಡ ಮತ್ತು ಮಲಯಾಳ ಲಿಪಿ ಟೈಪ್ ಮಾಡಿದಾಗ ನೇರವಾಗಿ ತುಳು ಲಿಪಿಗೆ ಬದಲಾಗುತ್ತದೆ. ತುಳು ಲಿಪಿಗೆ ಯೂನಿಕೋಡ್ ಮಾನ್ಯತೆ ಸಿಗುವವರೆಗೂ ಪುಸ್ತಕ ಮುದ್ರಣ, ಸಂಕಲನ, ಆಮಂತ್ರಣ ಪತ್ರಿಕೆಗಳ ಮುದ್ರಣ, ಬ್ಯಾನರ್ ತಯಾರಿಕೆಗೆ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ತುಳು ಲಿಪಿ ಬಳಸಲು ಸಹಕಾರಿಯಾಗಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಕಾಂತಿ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೇನಸಿರಿ ಲಿಪಿಯನ್ನು ಅಭಿವೃದ್ಧಿಪಡಿಸಿರುವ 17 ವರ್ಷದ ಜ್ಞಾನೇಶ ದೇರಳಕಟ್ಟೆ ಮಾತನಾಡಿ, ‘ಮಾತೃಭಾಷೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ದೇಶದ ಇತರೆ ಭಾಷೆಗಳಿಗೂ ಅನ್ವಯಿಸಲು ಸಾಧ್ಯವಾಗುವಂತೆ ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.