ADVERTISEMENT

ಬೆಂಗಳೂರಿನ ಬಂಡೆ ಕೊರೆಯಬೇಡಿ: ಆರ್‌. ಅಶೋಕ ಮನವಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 14:15 IST
Last Updated 2 ನವೆಂಬರ್ 2025, 14:15 IST
‘ಲಾಲ್‌ಬಾಗ್ ಉಳಿಸಿ, ಸುರಂಗ ರಸ್ತೆ ನಿಲ್ಲಿಸಿ’ ಅಭಿಯಾನದಲ್ಲಿ ಆರ್‌. ಅಶೋಕ, ತೇಜಸ್ವಿ ಸೂರ್ಯ, ಉದಯ ಗರುಡಾಚಾರ್‌, ಸಿ.ಕೆ. ರಾಮಮೂರ್ತಿ, ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಚಿತ್ರ
‘ಲಾಲ್‌ಬಾಗ್ ಉಳಿಸಿ, ಸುರಂಗ ರಸ್ತೆ ನಿಲ್ಲಿಸಿ’ ಅಭಿಯಾನದಲ್ಲಿ ಆರ್‌. ಅಶೋಕ, ತೇಜಸ್ವಿ ಸೂರ್ಯ, ಉದಯ ಗರುಡಾಚಾರ್‌, ಸಿ.ಕೆ. ರಾಮಮೂರ್ತಿ, ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಕೆಲವರು ಕನಕಪುರದ ಬಂಡೆ ಎಂದು ಹೇಳುತ್ತಾರೆ. ಅವರು ಬೆಂಗಳೂರಿನ ಬಂಡೆಯನ್ನು ಕೊರೆಯುವ ಯೋಜನೆ ಕೈಬಿಡಬೇಕು. 3 ಸಾವಿರ ದಶಲಕ್ಷ ವರ್ಷಗಳ ಇತಿಹಾಸ ಇರುವ ಈ ಶಿಲೆಗಳನ್ನು ಉಳಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು.

ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ‘ಲಾಲ್‌ಬಾಗ್ ಉಳಿಸಿ, ಸುರಂಗ ರಸ್ತೆ ನಿಲ್ಲಿಸಿ’ ಸೌಹಾರ್ದ ನಡಿಗೆ-ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಭೂಕಂಪ, ಪ್ರವಾಹಗಳಿಲ್ಲದೇ ಜನರು ಸುರಕ್ಷಿತವಾಗಿರಲಿ ಎಂದು ಕೆಂಪೇಗೌಡರು ಶಿಲೆಗಳ ಮೇಲೆ ನಗರವನ್ನು ಕಟ್ಟಿದ್ದರು. ಇದನ್ನು ಡಿ.ಕೆ. ಶಿವಕುಮಾರ್‌ ಹಾಳು ಮಾಡುತ್ತಿದ್ದಾರೆ. ಮೊದಲೇ ಆರ್ಥಿಕವಾಗಿ ದಿವಾಳಿ ಎದ್ದಿರುವ ಸರ್ಕಾರವು ಈ ಯೋಜನೆಯ ಮೂಲಕ ಪಾತಾಳಕ್ಕೆ ಗುಂಡಿ ತೋಡುವುದಲ್ಲದೇ ಆರ್ಥಿಕತೆಯನ್ನೂ ಪಾತಾಳಕ್ಕೆ ಒಯ್ಯುತ್ತಿದೆ ಎಂದು ಟೀಕಿಸಿದರು.

ADVERTISEMENT

ಗುತ್ತಿಗೆದಾರರಿಗೆ ₹ 4000 ಕೋಟಿ ಪಾವತಿ ಬಾಕಿ ಇದೆ. ಈ ಯೋಜನೆಗೆ ನಗರದ ಆಸ್ತಿಗಳನ್ನು ಅಡಮಾನ ಇಟ್ಟು ₹ 8000 ಕೋಟಿ ಸಾಲ ಮಾಡಲು ಸರ್ಕಾರ ಹೊರಟಿದೆ. ಅದರ ಬಡ್ಡಿಯನ್ನು ಹೇಗೆ ಕಟ್ಟುತ್ತೀರಿ? ಈಗಾಗಲೇ ಗುತ್ತಿಗೆದಾರರ ಸ್ಥಿತಿ ಚಿಂತಾಜನಕವಾಗಿದೆ. ಈ ಯೋಜನೆಯ ಗುತ್ತಿಗೆದಾರರಿಗೂ ಮುಂದೆ ಅದೇ ಸ್ಥಿತಿ ಬರಲಿದೆ ಎಂದು ಹೇಳಿದರು.

ಖಾಸಗಿ ಜಾಗದಲ್ಲಿ ಮಾಡಿದರೆ ಭೂ ಸ್ವಾಧೀನಕ್ಕೆ ಹೆಚ್ಚು ಪರಿಹಾರ ಕೊಡಬೇಕಾಗುತ್ತದೆ. ದಿವಾಳಿಯಾಗಿರುವ ಸರ್ಕಾರದಲ್ಲಿ ಅದಕ್ಕೆ ದುಡ್ಡಿಲ್ಲ. ಹಾಗಾಗಿ ಉದ್ಯಾನ, ಕೆರೆಗಳನ್ನು ಹುಡುಕಿ ಯೋಜನೆ ರೂಪಿಸುತ್ತಿದ್ದಾರೆ. ಸ್ಯಾಂಕಿ ಕೆರೆಗೂ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.

ಎತ್ತಿನಹೊಳೆ ಯೋಜನೆ ಸಹಿತ ಯಾವುದೇ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಇವರು ಪೂರ್ತಿಗೊಳಿಸಿಲ್ಲ. ನೆಲದ ಮೇಲಿನ ಯೋಜನೆಗಳಿಗೇ ಇವರು 10–12 ವರ್ಷ ತೆಗೆದುಕೊಳ್ಳುವುದರಿಂದ ಈ ಸುರಂಗ ರಸ್ತೆ ಪೂರ್ಣಗೊಳ್ಳುವಾಗ ನಾವು ಇರುವುದಿಲ್ಲ. ನಮ್ಮ ಮರಿಮಕ್ಕಳ ಕಾಲಕ್ಕೆ ಪೂರ್ಣಗೊಳ್ಳಬಹುದು ಎಂದರು.

ಸುರಂಗ ಕೊರೆಯುವ ಯಂತ್ರಗಳನ್ನು ಜರ್ಮನಿಯಿಂದ ತರಿಸುತ್ತಿದ್ದಾರೆ. ಅದು ಕೆಲಸ ಆರಂಭಿಸುವ ಹೊತ್ತಿಗೆ ಈ ಸರ್ಕಾರವೇ ಇರುವುದಿಲ್ಲ. ಮುಂದೆ ಬರುವ ಸರ್ಕಾರ ಯೋಜನೆಯನ್ನು ಮುಂದುವರಿಸದೇ ಇದ್ದರೆ ಯಂತ್ರಗಳನ್ನು ಗುಜರಿ ಅಂಗಡಿಗೆ ಕೊಡಬೇಕಷ್ಟೇ ಎಂದು ಹೇಳಿದರು.

ಮಂಗಳಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ್ದಕ್ಕಿಂತ ಅಧಿಕ ವೆಚ್ಚ ಇಲ್ಲಿ ಸುರಂಗ ಕೊರೆಯಲು ವೆಚ್ಚವಾಗುತ್ತಿದೆ. ಒಂದು ಕಿ.ಮೀ. ಸುರಂಗ ಕೊರೆಯಲು ₹ 1,285 ಕೋಟಿ ಬೇಕು. ಅದೇ ವೆಚ್ಚದಲ್ಲಿ ಐದು ಕಿ.ಮೀ. ಮೆಟ್ರೊ ಮಾರ್ಗ ನಿರ್ಮಿಸಬಹುದು. 1,800 ವಾಹನಗಳಿಗೆ ಸುರಂಗ ರಸ್ತೆ ಅನುಕೂಲವಾದರೆ, ಮೆಟ್ರೊ ಮಾರ್ಗವು 60 ಸಾವಿರ ಜನರಿಗೆ ಅನುಕೂಲವಾಗಲಿದೆ ಎಂದರು.

ಹಲವು ಇಲಾಖೆಗಳ ಅನುಮತಿ ಬೇಕು. ಯಾವುದೇ ಇಲಾಖೆಯಿಂದ ಇಲ್ಲಿವರೆಗೆ ಅನುಮತಿ ಪಡೆದಿಲ್ಲ. ಆದರೂ ಟೆಂಡರ್‌ ಕರೆಯಲಾಗಿದೆ. ಬಿಹಾರ ಚುನಾವಣೆಗಾಗಿ ಅಥವಾ ತಮಿಳುನಾಡು ಚುನಾವಣೆಗಾಗಿ ಈ ಯೋಜನೆ ರೂಪಿಸಿರಬೇಕು ಎಂದು ಹೇಳಿದರು.

ತೇಜಸ್ವಿ ಸೂರ್ಯ, ರಾಮಮೂರ್ತಿ, ಕಿರಣ್‌ ಮಜುಂದಾರ್‌, ಮೋಹನ್‌ದಾಸ್‌ ಪೈ ಸಹಿತ ಎಲ್ಲರಿಗೂ ಡಿ.ಕೆ. ಶಿವಕುಮಾರ್‌ ಧಮ್ಕಿ ಹಾಕಿದ್ದಾರೆ. ಧಮ್ಕಿ ಹಾಕುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಹೇಳಿದರು.

ಅವಿವೇಕದ ಯೋಜನೆ ಬೇಡ: ತೇಜಸ್ವಿ ಸೂರ್ಯ

‘ಅಹಂಕಾರದ ಯೋಜನೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಬದಲು ರಾಜ್ಯ ಸರ್ಕಾರವು ಸುಸ್ಥಿರ ದೀರ್ಘಾವಧಿಯ ಸಾರಿಗೆ ಪರಿಹಾರಗಳಲ್ಲಿ ಹೂಡಿಕೆ ಮಾಡಬೇಕು. ಮೆಟ್ರೊ ಉಪನಗರ ರೈಲು ಬಿಎಂಟಿಸಿ ಜಾಲಗಳನ್ನು ಬಲಪಡಿಸಬೇಕು’ ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು. ‘ಲಾಲ್‌ಬಾಗ್ ಉಳಿಸಿ ಸುರಂಗ ರಸ್ತೆ ನಿಲ್ಲಿಸಿ’ ಅಭಿಯಾನದಲ್ಲಿ ಮಾತನಾಡಿದ ಅವರು ‘ಬೆಂಗಳೂರಿನ ಪರಂಪರೆ ಪರಿಸರನ್ನು ನಾಶ ಮಾಡುವ ಅವಿವೇಕದ ಯೋಜನೆಗಳು ಬೇಡ. ಹಸಿರು ಉಳಿಸುವ ದೂರದೃಷ್ಟಿಯ ಮೂಲಸೌಕರ್ಯ ಬೇಕು’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.