ಬೆಂಗಳೂರು: ದ್ವಿತೀಯ ಪಿಯು ಮುಗಿಸಿ, ನೀಟ್ ಹಾಗೂ ಸಿಇಟಿ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಾದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಬೆಂಗಳೂರು ಅರಮನೆ ಮೈದಾನದಲ್ಲಿ (ತ್ರಿಪುರವಾಸಿನಿ) ಇದೇ ಏಪ್ರಿಲ್ 12 ಮತ್ತು 13ರಂದು ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಆಯೋಜಿಸಿದೆ.
60ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ವೈವಿಧ್ಯಮಯ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ಈ ಕಾರ್ಯಕ್ರಮವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾಂಸ್ಥಿಕ ಪ್ರದರ್ಶನಗಳ ಜತೆಗೆ, ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಖ್ಯಾತ ಶಿಕ್ಷಣ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.
ಈ ಶೈಕ್ಷಣಿಕ ಮೇಳವನ್ನು ಏಪ್ರಿಲ್ 12ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಹಿರಿಯ ನಟ ಪ್ರಕಾಶ್ ಬೆಳವಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವರು. ಮಂಡ್ಯ ಜಿಲ್ಲಾ ಪಂಚಾಯತ್‌ನ ಸಿಇಒ, ಐಎಎಸ್ ಅಧಿಕಾರಿ ನಂದಿನಿ ಕೆ.ಆರ್. ಪ್ರೇರಣಾ ಭಾಷಣ ಮಾಡುವರು. ಪರೀಕ್ಷೆಯ ಪ್ರಮುಖ ಅಂಶಗಳು ಮತ್ತು ಕಾಲೇಜು ಆಯ್ಕೆ ಪ್ರಕ್ರಿಯೆ, ಸಿಇಟಿ ಕುರಿತು ಎ.ಎಸ್. ರವಿ ಅವರು ಉಪಯುಕ್ತ ಮಾಹಿತಿ ನೀಡುವರು.
ಅಣಕು ಸಿಇಟಿ:
ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸಿಇಟಿ ಬರೆಯಲು ಅನುಕೂಲವಾಗುವಂತೆ ಮೇಳದಲ್ಲೇ ಅಣಕು ಸಿಇಟಿ ಪರೀಕ್ಷೆಯೂ ನಡೆಸಲಾಗುತ್ತಿದೆ. ಅದಕ್ಕಾಗಿ ಏಪ್ರಿಲ್ 13ರಂದು ಎರಡು ಆಕರ್ಷಕ ಅವಧಿಗಳನ್ನು ಮೀಸಲಿಡಲಾಗಿದೆ. ಅಲ್ಲದೇ, ವೈದ್ಯಕೀಯ ಆಕಾಂಕ್ಷಿಗಳಿಗೆ ಅಣಕು ನೀಟ್ ಪರೀಕ್ಷೆ ನಡೆಸಲಾಗುತ್ತದೆ. ಉತ್ತಮ ಅಂಕಗಳಿಸಿದವರಿಗೆ ಬಹುಮಾನ ನೀಡಲಾಗುತ್ತದೆ.
‘ಐ ವಿಶ್ ಸಮ್‌ಒನ್ ಟೋಲ್ಡ್ ಮಿ ದಿಸ್ ಬಿಫೋರ್ ಮೈ ಫಸ್ಟ್ ಜಾಬ್’ ಮತ್ತು ‘ಮೈಂಡ್‌ಫುಲ್ ಮೊಮೆಂಟಮ್’ ಕೃತಿಗಳ ಲೇಖಕ ಸುಶಾಂತ್ ರಜಪೂತ್, ಅವರು ‘ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪ್ರಾಮುಖ್ಯತೆಯ ಮೇಲೆ ಕೇಂದ್ರೀಕರಿಸುವ ಪರ್ಯಾಯ ವೃತ್ತಿ ಅವಕಾಶಗಳು’ ಕುರಿತು ಮಾತನಾಡುವರು. ಪ್ರಸಿದ್ಧ ವೃತ್ತಿ ಸಲಹೆಗಾರರಾದ ಅಮೀನ್-ಎ-ಮುದಸ್ಸರ್ ವೃತ್ತಿ ಸಮಾಲೋಚನೆಯ ಅಗತ್ಯದ ಕುರಿತು ಮಾಹಿತಿ ನೀಡಲಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಕೌಶಲ ಪ್ರದರ್ಶಿಸಲು ರೇಡಿಯೊ ‘ಸಿಟಿ 91.1FM’ ವೇದಿಕೆ ಒದಗಿಸಲಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪ್ರದರ್ಶಿಸಲಾದ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಬಹುದು. ಅವಕಾಶಕ್ಕಾಗಿ ತಮ್ಮ ಧ್ವನಿಮುದ್ರಿಕೆಗಳನ್ನು ಸಲ್ಲಿಸಬಹುದು. ಎರಡೂ ದಿನವೂ ರೇಡಿಯೊ ಜಾಕಿಗಳು ವಿದ್ಯಾರ್ಥಿಗಳಿಗೆ ನೆರವಾಗುವರು.
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್, ಸಿಇಟಿ ಫಲಿತಾಂಶದ ನಂತರ ಉತ್ತಮ ಕಾಲೇಜು, ಕೋರ್ಸ್‌ಗಳ ಆಯ್ಕೆ, ಪ್ರವೇಶ ಶುಲ್ಕ, ಶೈಕ್ಷಣಿಕ ಸಾಲ ಸೌಲಭ್ಯ, ಭವಿಷ್ಯದಲ್ಲಿನ ಉದ್ಯೋಗಾವಕಾಶಗಳ ಕುರಿತು ಈ ಮೇಳ ಸಮಗ್ರ ಮಾಹಿತಿ ನೀಡಲಿದೆ.
ಆಯೋಜನೆ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’
ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ ಬೆಂಗಳೂರು
ದಿನಾಂಕ: ಏಪ್ರಿಲ್ 12–13
ಸಮಯ: ಬೆಳಿಗ್ಗೆ 10ರಿಂದ
ಉದ್ಘಾಟನೆ: ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಮುಖ್ಯ ಅತಿಥಿ: ಪ್ರಕಾಶ್ ಬೆಳವಾಡಿ, ನಟ
ಪ್ರೇರಣಾ ಭಾಷಣ: ನಂದಿನಿ ಕೆ.ಆರ್, ಸಿಇಒ, ಮಂಡ್ಯ ಜಿ.ಪಂ
ಸಂಪನ್ಮೂಲ ವ್ಯಕ್ತಿಗಳು: ಸುಶಾಂತ್ ರಜಪೂತ್, ಅಮೀನ್-ಎ-ಮುದಸ್ಸರ್, ಎ.ಎಸ್. ರವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.