ADVERTISEMENT

ಕರ್ನಾಟಕ ಹೈಕೋರ್ಟ್‌: ಇಬ್ಬರು ನ್ಯಾಯಮೂರ್ತಿಗಳ ನೇಮಕ

ಜಡ್ಜ್‌ಗಳ ಸಂಖ್ಯೆ 53ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 4:49 IST
Last Updated 7 ಫೆಬ್ರುವರಿ 2023, 4:49 IST
ವಿಜಯಕುಮಾರ್ ಎ.ಪಾಟೀಲ್, ರಾಜೇಶ್ ರೈ ಕಲ್ಲಂಗಳ
ವಿಜಯಕುಮಾರ್ ಎ.ಪಾಟೀಲ್, ರಾಜೇಶ್ ರೈ ಕಲ್ಲಂಗಳ   

ಬೆಂಗಳೂರು: ಸರ್ಕಾರದ ಪರ ವಕೀಲರಾಗಿದ್ದ ವಿಜಯಕುಮಾರ್ ಎ.ಪಾಟೀಲ್ ಹಾಗೂ ಹೈಕೋರ್ಟ್‌ ವಕೀಲ ರಾಜೇಶ್‌ ರೈ ಕಲ್ಲಂಗಳ ಅವರನ್ನು ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.‌

ಈ ಕುರಿತಂತೆ ಕೇಂದ್ರ ಕಾನೂನು ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ. ಇಬ್ಬರೂ 2 ವರ್ಷಗಳ ಕಾಲ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕೆಲಸ ನಿರ್ವಹಿಸಲಿದ್ದು ನಂತರ ಅವರ ಸೇವೆ ಕಾಯಂಗೊಳ್ಳಲಿದೆ.

ಇತ್ತೀಚೆಗಷ್ಟೇ ರಾಮಚಂದ್ರ ಡಿ.ಹುದ್ದಾರ ಹಾಗೂ ವೆಂಕಟೇಶ್ ಟಿ.ನಾಯಕ್‌ ಅವರನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರ ವಿಭಾಗದಿಂದ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಹೈಕೋರ್ಟ್‌ ವಕೀಲರ ವಿಭಾಗದಿಂದ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ADVERTISEMENT

ವಿಜಯಕುಮಾರ್ ಎ.ಪಾಟೀಲ್ ಹಾಗೂ ರಾಜೇಶ್ ರೈ ಕಲ್ಲಂಗಳ ಅವರ ನೇಮಕದಿಂದ ಈಗ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 53ಕ್ಕೆ ಏರಿದಂತಾಗಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62.

2023ರ ಮೇ 21ಕ್ಕೆ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನಿವೃತ್ತಿ ಹೊಂದಲಿದ್ದರೆ ಮೇ 31ಕ್ಕೆ ನ್ಯಾಯಮೂರ್ತಿ ಬಿ.ವೀರಪ್ಪ ನಿವೃತ್ತಿ ಹೊಂದಲಿದ್ದಾರೆ. ‘ಹೈಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 45ರಿಂದ ಏರಿಕೆ ಆಗಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 50 ದಾಟಿದೆ’ ಎನ್ನುತ್ತಾರೆ ಹಿರಿಯ ವಕೀಲ ಬಿ.ವಿ.ಆಚಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.