ADVERTISEMENT

ಇಷ್ಟದ ಖಾತೆಗೆ ಪಟ್ಟು: ಹಂಚಿಕೆ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:05 IST
Last Updated 23 ಜೂನ್ 2019, 19:05 IST
   

ಬೆಂಗಳೂರು: ತಮ್ಮ ಇಷ್ಟದ ಖಾತೆಯೇ ಬೇಕು ಎಂದು ಆರ್.ಶಂಕರ್ ಹಾಗೂ ಎಚ್.ನಾಗೇಶ್ ಅವರು ಹಟ ಹಿಡಿದಿರುವುದರಿಂದ ಖಾತೆ ಹಂಚಿಕೆ ಕಗ್ಗಂಟಾಗಿದೆ. ಇವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿ ಹತ್ತು ದಿನಗಳು ಕಳೆದರೂ ಇದೇ ಕಾರಣದಿಂದ ‘ಖಾತೆ ರಹಿತ’ ಸಚಿವರಾಗಿಯೇ ಇದ್ದಾರೆ.

ಇದನ್ನು ಗಮನಿಸಿದರೆ ಖಾತೆ ಹಂಚಿಕೆ ಸುಲಭವಲ್ಲ ಎನಿಸುತ್ತದೆ. ಇನ್ನೂ ಸಾಧ್ಯತೆಗಳ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಸಚಿವರಿಗೂ ತಕ್ಷಣಕ್ಕೆ ಖಾತೆ ಹಂಚಿಕೆಯಾಗುವ ವಿಶ್ವಾಸವಿಲ್ಲ. ‘ಯಾವಾಗ ಆಗುತ್ತದೆಯೇ ನೋಡೋಣ’ ಎಂದು ಹೇಳುತ್ತಾರೆ.

ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಶಂಕರ್, ಅರಣ್ಯ ಸಚಿವರಾಗಿದ್ದರು. ಸಂಪುಟ ವಿಸ್ತರಣೆ ಸಮಯದಲ್ಲಿ ಕೈಬಿಡಲಾಗಿತ್ತು. ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಸಚಿವ ಸ್ಥಾನ ನೀಡಲಾಗಿದೆ. ಆದರೆ ಶಂಕರ್‌ ತಾವು ಹಿಂದೆ ನಿರ್ವಹಿಸುತ್ತಿದ್ದ ಅರಣ್ಯ ಖಾತೆಯೇ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ ಈ ಖಾತೆ ಸತೀಶ್ ಜಾರಕಿಹೊಳಿ ಬಳಿ ಇದೆ.

ADVERTISEMENT

ಪೌರಾಡಳಿತ ಖಾತೆಯನ್ನುಸಿ.ಎಸ್.ಶಿವಳ್ಳಿ ನಿರ್ವಹಿಸುತ್ತಿದ್ದರು. ಅವರ ನಿಧನದ ನಂತರ ಈ ಖಾತೆಯನ್ನು ಶಂಕರ್‌ಗೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಆದರೆ ಇದಕ್ಕೆ ಅವರು ಸಹಮತ ವ್ಯಕ್ತಪಡಿಸಿಲ್ಲ. ಪಟ್ಟು ಸಡಿಲಿಸದಿದ್ದರೆ ಖಾತೆ ಹಂಚಿಕೆ ಮತ್ತಷ್ಟು ದಿನ ಮುಂದಕ್ಕೆ ಹೋಗುವ ಬಗ್ಗೆ ಪರೋಕ್ಷವಾಗಿ ಕುಮಾರಸ್ವಾಮಿ ಎಚ್ಚರಿಕೆ ರವಾನಿಸಿದ್ದರು ಎನ್ನಲಾಗಿದೆ.

ಕಾಂಗ್ರೆಸ್‌ಗೆ ಹಂಚಿಕೆ ಆಗಿರುವ ಖಾತೆಗಳಲ್ಲಿ ಈಗ ಪೌರಾಡಳಿತ ಬಿಟ್ಟರೆ ಬೇರೆ ಯಾವುದೇ ಖಾತೆ ಬಾಕಿ ಇಲ್ಲ. ಜಾರಕಿಹೊಳಿ ಅವರಿಂದ ಅರಣ್ಯ ಖಾತೆ ವಾಪಸ್ ಪಡೆದು, ಹಂಚಿಕೆ ಮಾಡುವುದು ಕಷ್ಟ. ಕಾಂಗ್ರೆಸ್ ಸಚಿವರ ಖಾತೆಗಳನ್ನು ಮರು ಹಂಚಿಕೆ ಮಾಡಿದರೆ ಮಾತ್ರ ಶಂಕರ್‌ಗೆ ಅರಣ್ಯ ಖಾತೆ ಸಿಗಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಖಾತೆ ಮರು ಹಂಚಿಕೆ ಸಾಧ್ಯತೆಗಳು ಇಲ್ಲ.

ಹಾಗಾಗಿ ಪೌರಾಡಳಿತ ಖಾತೆ ಒಪ್ಪಿಕೊಳ್ಳುವುದು ಅನಿವಾರ್ಯ ಆಗಬಹುದು. ಹಟ ಬಿಡದಿದ್ದರೆ ಮತ್ತಷ್ಟು ದಿನಗಳ ಕಾಲ ‘ಖಾತೆ ರಹಿತ’ ಸಚಿವರಾಗಿಯೇ ಮುಂದುವರಿಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಾಗೇಶ್ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆಗೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚಿನ ಅವಕಾಶಗಳಿದ್ದು, ಇದೇ ಖಾತೆ ಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ‘ಸಾಕಷ್ಟು ಕಾರ್ಯಭಾರದ ಒತ್ತಡ ಹೊಂದಿರುವ ಮುಖ್ಯಮಂತ್ರಿ, ತಮ್ಮ ಬಳಿಯೇ ಪ್ರಾಥಮಿಕ ಶಿಕ್ಷಣ ಖಾತೆ ಉಳಿಸಿಕೊಂಡರೆ ನಿರ್ವಹಣೆ ಕಷ್ಟಕರವಾಗುತ್ತದೆ. ಹಾಗಾಗಿ ಬೇರೆಯವರಿಗೆ ಹಂಚಿಕೆ ಮಾಡಬೇಕು. ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದವರಿಗೆ ಖಾತೆ ಹಂಚಿಕೆ ಮಾಡಬೇಕು’ ಎಂದು ಶಾಸಕ ಎಚ್.ವಿಶ್ವನಾಥ್ ಆಗ್ರಹಿಸಿದ್ದರು.

ಈಗಿನ ರಾಜಕೀಯ ಪರಿಸ್ಥಿಯಲ್ಲಿ ಹಂಚಿಕೆ ಮಾಡುವ ಖಾತೆಗಳನ್ನು ಇಬ್ಬರೂ ಸಚಿವರು ಒಪ್ಪಿಕೊಳ್ಳುವುದು ಅನಿವಾರ್ಯವಾಗಲಿದ್ದು, ಸೋಮವಾರ ಬಹುತೇಕ ನಿರ್ಧಾರವಾಗಬಹುದು. ಇಲ್ಲವಾದರೆ ಮತ್ತಷ್ಟು ದಿನಗಳು ಮುಂದಕ್ಕೆ ಹೋಗಬಹುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.