ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 73 ಮಂದಿಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಹಿಂದಿರುಗಿದ್ದ 61 ಮಂದಿ ಹಾಗೂ ದುಬೈನಿಂದ ಬಂದಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಐವರ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಸೋಂಕಿತರನ್ನು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ಕೋವಿಡ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಗರ್ಭಿಣಿ, ಮಕ್ಕಳು ಹಾಗೂ ವೃದ್ಧರಿಗೆ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಾಲ್ವರು ಪೊಲೀಸರು:ಸೋಂಕಿತರಲ್ಲಿ ಡಿಎಆರ್ ಸಿಬ್ಬಂದಿ ಸೇರಿ ನಾಲ್ವರು ಪೊಲೀಸರು ಇದ್ದು, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್‌ನಲ್ಲಿರಿಸಲಾಗುವುದು ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.
ಸೋಂಕಿತರ ಸಂಖ್ಯೆ 260ಕ್ಕೇರಿಕೆ:ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 260ಕ್ಕೇರಿಕೆಯಾಗಿದ್ದು, ಒಬ್ಬರು ಮೃತಪಟ್ಟು, 196 ಸಕ್ರಿಯ ಪ್ರಕರಣಗಳು ಇವೆ. ಇದುವರೆಗೂ63 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮಹಾರಾಷ್ಟ್ರ ನಂಟು:ಜಿಲ್ಲೆಯಲ್ಲಿ ಪತ್ತೆಯಾಗಿರುವ ಶೇ 80ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳಿಗೆ ಮಹಾರಾಷ್ಟ್ರದ ಸಂಪರ್ಕವಿದೆ. ಇನ್ನೂ 7 ಸಾವಿರಕ್ಕೂ ಹೆಚ್ಚು ವರದಿಗಳು ಪ್ರಯೋಗಾಲಯದಿಂದ ಬರಲು ಬಾಕಿ ಇದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಕೇಂದ್ರ ಸರ್ಕಾರದ ನೂತನ ನಿಯಮಗಳ ಪ್ರಕಾರ, ಹೊರ ರಾಜ್ಯಗಳಿಂದ ಬಂದು 7 ದಿನ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ಸಾವಿರಾರು ಮಂದಿಯನ್ನು ಹೋಂ ಕ್ವಾರಂಟೈನ್‌ಗೆ ಮನೆಗೆ ಕಳುಹಿಸಲಾಗಿದೆ. ಪರಿಣಾಮ ಸೋಂಕು ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.