ADVERTISEMENT

2010ರಲ್ಲೇ ಮಂಕಿ ಪಾರ್ಕ್ ಅಧ್ಯಯನ!

ಪರ್ಯಾಯ ಕ್ರಮಕ್ಕೆ ಶಿಫಾರಸು ಮಾಡಿದ್ದನ್ನು ನೆನಪಿಸಿದ ಕಿಸಾನ್ ಸಂಘ

ಪ್ರಜಾವಾಣಿ ವಿಶೇಷ
Published 11 ನವೆಂಬರ್ 2019, 20:15 IST
Last Updated 11 ನವೆಂಬರ್ 2019, 20:15 IST
ಹಿಮಾಚಲ ಪ್ರದೇಶಕ್ಕೆ ಮಂಕಿ ಪಾರ್ಕ್ ಅಧ್ಯಯನಕ್ಕೆ ತೆರಳಿದ್ದ ರಾಜ್ಯದ ನಿಯೋಗ
ಹಿಮಾಚಲ ಪ್ರದೇಶಕ್ಕೆ ಮಂಕಿ ಪಾರ್ಕ್ ಅಧ್ಯಯನಕ್ಕೆ ತೆರಳಿದ್ದ ರಾಜ್ಯದ ನಿಯೋಗ   

ಉಡುಪಿ: ಮಂಗಗಳ ಹಾವಳಿ ತಡೆಗೆ ಹಿಮಾಚಲ ಪ್ರದೇಶದಲ್ಲಿ 2008ರಲ್ಲಿ ಸ್ಥಾಪಿಸಿದ್ದ ‘ಮಂಕಿ ಪಾರ್ಕ್‌’ ಕುರಿತು ರಾಜ್ಯದ ತಂಡ 2010ರಲ್ಲೇ ಅಧ್ಯಯನ ನಡೆಸಿತ್ತು. ಅಲ್ಲಿ ‘ಮಂಕಿ ಪಾರ್ಕ್‌’ ವಿಫಲವಾಗಿರುವುದನ್ನು ಕಂಡಿದ್ದ ಅಧ್ಯಯನ ತಂಡ ಪರ್ಯಾಯ ಕ್ರಮಗಳಿಗೆ ಶಿಫಾರಸು ಮಾಡಿತ್ತು ಎಂಬುದನ್ನು ಭಾರತೀಯ ಕಿಸಾನ್‌ ಸಂಘ ನೆನಪಿಸಿದೆ.

ಈಗ ಮತ್ತೆ ‘ಮಂಕಿ ಪಾರ್ಕ್‌’ ಅಧ್ಯಯನಕ್ಕೆ ಹಿಮಾಚಲ ಪ್ರದೇಶಕ್ಕೆ ತಂಡವೊಂದನ್ನು ಕಳುಹಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆ, ‘ವಿಫಲ ಯೋಜನೆಯ ಅನುಷ್ಠಾನಕ್ಕೆ ಉತ್ಸುಕತೆ ಏಕೆ’ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.

2010ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಂದಿನ ಗೃಹ ಸಚಿವ ಡಾ.ವಿ.ಎಸ್‌.ಆಚಾರ್ಯ ಅವರ ಸೂಚನೆಯಂತೆ ಹಿಮಾಚಲ ಪ್ರದೇಶದಲ್ಲಿರುವ ಮಂಕಿ ಪಾರ್ಕ್‌ ಅಧ್ಯಯನಕ್ಕೆ ರಾಜ್ಯದ ನಿಯೋಗ ತೆರಳಿತ್ತು. ಮೂಡುಬಿದಿರೆ ಎಸಿಎಫ್‌ಒ ಸದಾಶಿವ ಭಟ್ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ತಂಡ ಹಾಗೂ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಅಧ್ಯಯನಕ್ಕೆ ತೆರಳಿದ್ದರು.

ADVERTISEMENT

‘ಅಲ್ಲಿ ಪ್ರಾಯೋಗಿಕವಾಗಿ 10 ಎಕರೆಯಲ್ಲಿ ನಿರ್ಮಾಣವಾಗಿದ್ದ ಮಂಕಿ ಪಾರ್ಕ್ ಯೋಜನೆ ಸಂಪೂರ್ಣ ವಿಫಲವಾಗಿದ್ದು ಕಂಡುಬಂತು. ಅಲ್ಲಿನ ಸರ್ಕಾರವೇ ಯೋಜನೆಯನ್ನು ಕೈಬಿಟ್ಟು, 2010ರಲ್ಲಿ ಮಂಗಗಳ ಸಂತಾನಶಕ್ತಿ ಹರಣ ಕೇಂದ್ರ ಆರಂಭಿಸಿತ್ತು. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು’ ಎಂದು ಕಿಸಾನ್ ಸಂಘದ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು .

ಮಂಕಿ ಪಾರ್ಕ್ ಬದಲಿಗೆ ಕಾಡುಪ್ರಾಣಿಗಳ ಹಾಗೂ ಮಂಗಗಳ ಹಾವಳಿ ತಡೆಗೆ ಪರಿಹಾರವಾಗಬಲ್ಲ 10 ಅಂಶಗಳನ್ನೊಳಗೊಂಡ ₹29 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಡಾ.ವಿ.ಎಸ್.ಆಚಾರ್ಯ ಅವರ ನಿಧನದ ನಂತರ ಪ್ರಸ್ತಾವ ಮೂಲೆ ಗುಂಪಾಯಿತು ಎಂದು ವಿವರಿಸಿದರು.

ನಿಯೋಗದ ವರದಿಯಲ್ಲಿ ಏನಿತ್ತು?: ರಾಜ್ಯದಲ್ಲೂ ಮಂಗಗಳ ಸಂತಾನ ಶಕ್ತಿ ಹರಣ ಕೇಂದ್ರ ಸ್ಥಾಪಿಸಬೇಕು. ಹಾವಳಿ ಹೆಚ್ಚಾಗಿರುವ ಕಡೆಗಳಲ್ಲಿ ಹರೆಯದ ಮಂಗಗಳನ್ನು ಹಿಡಿದು, ಅವುಗಳ ಸಂತಾನ ಶಕ್ತಿ ಹರಣ ಮಾಡಿ ಪುನಃ ಕಾಡಿಗೆ ಬಿಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ಕರಾವಳಿ, ಮಲೆನಾಡಿನಲ್ಲಿ ಹೆಚ್ಚಿರುವ ಮಂಗಗಳನ್ನು ಹಿಡಿದು, ಮಂಗಗಳು ವಿರಳವಾಗಿರುವ ರಾಜ್ಯದ ಇತರೆ ಅರಣ್ಯಗಳಿಗೆ ಬಿಡಬಹುದು. ಇದರಿಂದ, ಮರ ಹತ್ತುವ ಸಾಮರ್ಥ್ಯವಿರುವ ಮಾಂಸಭಕ್ಷಕ ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುವುದು ತಪ್ಪುತ್ತದೆ ಎಂಬ ಸಲಹೆ ನೀಡಲಾಗಿತ್ತು.

ಅರಣ್ಯದ ಸುತ್ತ ಕಂದಕ, ಬೇಲಿಗಳನ್ನು ನಿರ್ಮಿಸಿ ಮಂಗಗಳು ಹೊರಬಾರದಂತೆ ತಡೆಯುವುದು. ಇದರಿಂದ ಅರಣ್ಯ ಅತಿಕ್ರಮಣ ತಡೆ ಸಾಧ್ಯವಿದೆ ಎಂಬ ಅಂಶಗಳನ್ನು ಪ್ರಸ್ತಾಪಿಸಿ ವರದಿ ಸಲ್ಲಿಸಲಾಗಿತ್ತು ಎಂದು ಸತ್ಯನಾರಾಯಣ ಉಡುಪ ಮಾಹಿತಿನೀಡಿದರು.

*
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮಂಕಿ ಪಾರ್ಕ್ ಅಧ್ಯಯನ ನಡೆದಿದೆ. ಈಗ ಮತ್ತೆ ಅಧ್ಯಯನದ ಅಗತ್ಯವಿಲ್ಲ.
-ಸತ್ಯನಾರಾಯಣ ಉಡುಪ, ಕಿಸಾನ್ ಸಂಘದ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.