ADVERTISEMENT

ಶೀರೂರು ಶ್ರೀ ಕೆವಿಯಟ್ ಸಲ್ಲಿಕೆ

ಕಗ್ಗಂಟಾಗುತ್ತಿರುವ ಪಟ್ಟದ ದೇವರ ಮೂರ್ತಿ ಹಸ್ತಾಂತರಿಸುವ ವಿವಾದ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:07 IST
Last Updated 5 ಜುಲೈ 2018, 20:07 IST
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ   

ಉಡುಪಿ: ಕೃಷ್ಣಮಠದಲ್ಲಿ ಪೂಜೆಗೆ ಇಟ್ಟಿರುವ ಪಟ್ಟದ ದೇವರನ್ನು ಕೊಡಲು ನಿರಾಕರಿಸುತ್ತಿರುವ ಮಠಾಧೀಶರ ವಿರುದ್ಧ ಶೀರೂರು ಶ್ರೀಗಳು ಉಡುಪಿ ನ್ಯಾಯಾಲಯಕ್ಕೆ ಕೆವಿಯಟ್‌ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಕೊಡುವುದಿಲ್ಲ ಎಂದು ಮಠಾಧೀಶರು ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಲಕ್ಷ್ಮೀವರತೀರ್ಥ ಶ್ರೀಗಳು ಕಾನೂನೂ ಹೋರಾಟಕ್ಕೆ ಮುಂದಾಗಿದ್ದಾರೆ.

ಅಷ್ಟಮಠದ ಯತಿಗಳು ಪಟ್ಟದ ದೇವರನ್ನು ಹಸ್ತಾಂತರಿಸುವ ವಿಷಯದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದಲ್ಲಿ ಏಕಪಕ್ಷೀಯ ಆದೇಶ ನೀಡಬಾರದು ಎಂಬ ಮುಂಜಾಗ್ರತೆಯಿಂದಾಗಿ ಶೀರೂರು ಶ್ರೀಗಳು ಕೆವಿಯಟ್‌ ಸಲ್ಲಿಸಿದ್ದಾರೆ.

ADVERTISEMENT

ಇದೇ 23ರಿಂದ ಚಾತುರ್ಮಾಸ್ಯವಿದ್ದು ಅಷ್ಟರೊಳಗೆ ಶೀರೂರು ಶ್ರೀಗಳ ಪ್ರಕರಣ ಇತ್ಯರ್ಥವಾಗುತ್ತದೆ ಎಂದು ಈಚೆಗೆ ಪಲಿಮಾರು ವಿದ್ಯಾಧೀಶ ಶ್ರೀಗಳು ಹೇಳಿದ್ದರು. ಈಗ ಶೀರೂರು ಶ್ರೀಗಳು ಕೆವಿಯಟ್ ಸಲ್ಲಿಸಿರುವುದರಿಂದ ಪ್ರಕರಣ ಸುಖಾಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.

ಪುತ್ತಿಗೆ ಶ್ರೀಗಳ ವಿಚಾರ ಭಿನ್ನ– ಪೇಜಾವರ ಶ್ರೀ: ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ವಿಚಾರ ಹಾಗೂ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳ ವಿಚಾರ ಭಿನ್ನ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಶೀರೂರು ಶ್ರೀಗಳು ಸನ್ಯಾಸಧರ್ಮ ಪಾಲಿಸುತ್ತಿಲ್ಲ ಎಂಬ ವಿಚಾರ ಈಗಾಗಲೇ ಬಹಿರಂಗವಾಗಿದೆ. ಆದರೆ, ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಗಳು ಸೀಮೋಲ್ಲಂಘನ (ವಿದೇಶ ಪ್ರವಾಸ) ಮಾಡಿದ್ದರೂ ಅವರು ಯತಿಧರ್ಮದಿಂದ ದೂರವಾಗಿರಲಿಲ್ಲ ಎಂದು ಪೇಜಾವರ ಶ್ರೀಗಳು ಸಮರ್ಥಿಸಿಕೊಂಡರು.

ಸನ್ಯಾಸಿ ಅಲ್ಲದವರು ಪಟ್ಟದ ದೇವರಿಗೆ ಪೂಜೆ ಮಾಡುವುದು ಸರಿಯಲ್ಲ. ಶೀರೂರು ಶ್ರೀಗಳಿಗೆ ಪಟ್ಟದ ದೇವರನ್ನು ಕೊಡಲು ಅನ್ಯ ಕಾರಣಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.