ADVERTISEMENT

ಮೃತ ವ್ಯಕ್ತಿಯ ಬೆರಳಚ್ಚು: ದತ್ತಾಂಶ ಮನವಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 18:06 IST
Last Updated 18 ನವೆಂಬರ್ 2025, 18:06 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮೃತ ವ್ಯಕ್ತಿಯ ಬೆರಳಚ್ಚಿನ ಮೂಲಕ ಗುರುತು ಪತ್ತೆಹಚ್ಚಲಿಕ್ಕಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಬಳಿ ಇರುವ ದತ್ತಾಂಶ ಹೋಲಿಕೆಗೆ ಅವಕಾಶ ಕಲ್ಪಿಸಬೇಕು’ ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟ್‌ ತಳ್ಳಿ ಹಾಕಿದೆ.

ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಸಲ್ಲಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ‘ದೃಢೀಕರಣಕ್ಕೆ ಜೀವಂತ ವ್ಯಕ್ತಿಯ ಬೆರಳಚ್ಚು ಅಗತ್ಯ’ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪರ ವಾದ ಮಂಡಿಸಿದ ಡೆಪ್ಯುಟಿ ಸಾಲಿಸಿಟರ್‌ ಜನರಲ್ ಎಚ್‌.ಶಾಂತಿಭೂಷಣ್‌ ‘ಗುರುತು ಪತ್ತೆ ಹಚ್ಚಲು ಬೆರಳಚ್ಚು ಬಳಕೆ ಮಾಡಬೇಕಾದರೆ ಅಂತಹ ವ್ಯಕ್ತಿ ಜೀವಂತವಾಗಿರಬೇಕು. ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆ ಮಾಡಲು ಬೆರಳಚ್ಚನ್ನು ಬಳಕೆ ಮಾಡಲಾಗದು’ ಎಂದು ಪ್ರತಿಪಾದಿಸಿದರು.

ADVERTISEMENT

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ ‘ಮೃತ ವ್ಯಕ್ತಿಯ ಬೆರಳಚ್ಚು ಹೊಂದಿಸಲು ತಾಂತ್ರಿಕ ನಿರ್ಬಂಧಗಳಿವೆ. ವ್ಯಕ್ತಿಗತ ಖಾಸಗಿತನವನ್ನು ಕಾಪಾಡುವುದು ಅವಶ್ಯ. ಹೀಗಾಗಿ ಯುಐಡಿಎಐ ದತ್ತಾಂಶದಲ್ಲಿ ಮೃತ ವ್ಯಕ್ತಿಯ ಬೆರಳಚ್ಚು ಶೋಧಿಸಲು ನಿರ್ದೇಶಿಸಲು ಆಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣವೇನು?: ಬ್ಯಾಟರಾಯನಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಲುವೆಯಲ್ಲಿ ಮೃತ ಮಹಿಳೆಯೊಬ್ಬರ ದೇಹ ಪತ್ತೆಯಾಗಿತ್ತು. ಇದನ್ನು ಕೊಲೆ ಪ್ರಕರಣ ಎಂದು ದಾಖಲು ಮಾಡಿಕೊಳ್ಳಲಾಗಿತ್ತು. ಮೃತ ಮಹಿಳೆಯ ಗುರುತನ್ನು ಪತ್ತೆ ಹಚ್ಚದ ಹೊರತಾಗಿ ತನಿಖೆ ಮುಂದುವರಿಸಲು ಕಷ್ಟವಾಗಿತ್ತು. ಹೀಗಾಗಿ ಠಾಣಾಧಿಕಾರಿ ಆಧಾರ್‌ ದತ್ತಾಂಶದ ಜೊತೆ ಮೃತ ಮಹಿಳೆಯ ಬೆರಳಚ್ಚು ಹೊಂದಿಸುವಂತೆ ಯುಐಡಿಎಐಗೆ ಮನವಿ ಸಲ್ಲಿಸಿದ್ದರು. ಆದರೆ ಯುಐಡಿಎಐ ‘ಹೈಕೋರ್ಟ್‌ ಆದೇಶ ನೀಡದ ಹೊರತು ಆಧಾರ್‌ ಕಾಯ್ದೆಯಡಿ ಯಾವುದೇ ವಿಚಾರ ಬಹಿರಂಗಪಡಿಸಲಾಗದು’ ಎಂದು ಮನವಿಯನ್ನು ತಿರಸ್ಕರಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.