ADVERTISEMENT

ಬ್ರಿಟನ್‌ನಿಂದ ಬಂದ 540 ಮಂದಿ ವಾರವಾದರೂ ಪತ್ತೆಯಾಗಿಲ್ಲ!

ಬ್ರಿಟನ್‌ನಿಂದ ಬಂದವರ ಪೈಕಿ ಮೂವರಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 1:22 IST
Last Updated 28 ಡಿಸೆಂಬರ್ 2020, 1:22 IST
   

ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ, ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಇದರೊಂದಿಗೆ ಇಂಗ್ಲೆಂಡ್‌ನಿಂದ ಬಂದ 26 ಮಂದಿಯಲ್ಲಿ ಸೋಂಕು ದೃಢಪಟ್ಟಂತಾಗಿದೆ. ಆದರೆ, ವಾರವಾದರೂ 540 ಪ್ರಯಾಣಿಕರು ಪತ್ತೆಯಾಗಿಲ್ಲ.

ಡಿ.27 ರಂದು 153 ಮಂದಿ ಪ್ರಯಾಣಿಕರ ಪರೀಕ್ಷೆ ನಡೆದಿದ್ದು, 87 ಮಂದಿ ವರದಿ ನೆಗೆಟಿವ್ ಬಂದಿದೆ. ಮೂರು ಮಾತ್ರ ಪಾಸಿಟಿವ್ ವರದಿಯಾಗಿದ್ದು, 63 ಪ್ರಯಾಣಿಕರ ವರದಿ ಇನ್ನು ಬರಬೇಕಿದೆ. ಸೋಂಕು ದೃಢಪಟ್ಟವರನ್ನು ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ತಗುಲಿರುವುದು ಬ್ರಿಟನ್ ರೂಪಾಂತರ ಸೋಂಕು ಹೌದೋ ಅಲ್ಲವೋ ಎಂಬುದನ್ನು ಪತ್ತೆ ಮಾಡಲು ನಿಮ್ಹಾನ್ಸ್‌ಗೆ ಗಂಟಲು ದ್ರವ ಮಾದರಿ ಕಳುಹಿಸಿಕೊಡಲಾಗಿದೆ. ಸೋಮವಾರ ಪರೀಕ್ಷೆಯ ಫಲಿತಾಂಶ ಬರಲಿದೆ. ಇದರೊಂದಿಗೆ ರೂಪಾಂತರ ಸೋಂಕು ರಾಜ್ಯಕ್ಕೂ ಕಾಲಿಟ್ಟಿದೆಯೋ, ಇಲ್ಲವೋ ಎಂಬುದು ಸ್ಪಷ್ಟವಾಗಲಿದೆ.

ಬ್ರಿಟನ್ ರೂಪಾಂತರ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಡಿಸೆಂಬರ್ 1ರಿಂದೀಚೆಗೆ ಇಂಗ್ಲೆಂಡ್‌ನಿಂದ ರಾಜ್ಯಕ್ಕೆ ಬಂದ 2,127 ಪ್ರಯಾಣಿಕರ ಸೋಂಕು ಪರೀಕ್ಷೆಗೆ ಡಿ.21 ರಂದು ರಾಜ್ಯ ಸರ್ಕಾರ ಸೂಚಿಸಿತ್ತು. ಈವರೆಗೂ 1,587 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಬಾಕಿ 540 ಪ್ರಯಾಣಿಕರು ಪತ್ತೆಯಾಗಿಲ್ಲ. ಪತ್ತೆ ಕಾರ್ಯ ಆರಂಭವಾಗಿ ಒಂದು ವಾರವಾದರೂ ಎಲ್ಲ ಪ್ರಯಾಣಿಕರು ಪತ್ತೆಯಾಗಿಲ್ಲ.

ADVERTISEMENT

ಪರೀಕ್ಷೆಗೆ ಒಳಪಟ್ಟವರ ಪೈಕಿ, 1,264 ಮಂದಿ ವರದಿ ನೆಗೆಟಿವ್ ಬಂದಿದ್ದು, 26 ಪಾಸಿಟಿವ್ ಬಂದಿವೆ. ಈ ಪೈಕಿ 15 ಬೆಂಗಳೂರಿನಲ್ಲಿ ಪತ್ತೆಯಾಗಿವೆ. ಬಾಕಿ 297 ಮಂದಿ ವರದಿ ಬರಬೇಕಿದೆ.

911 ಮಂದಿಗೆ ಕೋವಿಡ್‌: ರಾಜ್ಯದಲ್ಲಿ ಹೊಸದಾಗಿ 911 ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಇದರೊಂದಿಗೆ ಒಟ್ಟಾರೆ ಪ್ರಕರಣಗಳ ಸಂಖ್ಯೆ 9.16 ಲಕ್ಷಕ್ಕೆ ಏರಿದೆ.

ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ಹೆಚ್ಚಾಗಿದ್ದು, 1,214 ಮಂದಿ ಗುಣಮುಖರಾಗುವುದರೊಂದಿಗೆ ಈ ಸಂಖ್ಯೆ 8.91 ಲಕ್ಷಕ್ಕೆ ಹೆಚ್ಚಾಗಿದೆ. ಭಾನುವಾರ 11 ಜನ ಮೃತಪಟ್ಟಿದ್ದರೆ, 209 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.