ಬೆಂಗಳೂರು: ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ಸಂತ್ರಸ್ತೆ ಇದುವರೆಗೂ ಪತ್ತೆಯಾಗಿಲ್ಲ. ಅವರ ಹೇಳಿಕೆ ಸಿಗುವವರೆಗೂ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲವೆಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ನೀಡಿರುವ ದೂರು ಆಧರಿಸಿ ತನಿಖೆ ಆರಂಭಿಸಿರುವ ಕಬ್ಬನ್ ಪಾರ್ಕ ಠಾಣೆ ಪೊಲೀಸರು, ವಿಶೇಷ ತಂಡಗಳನ್ನು ರಚಿಸಿ ಸಂತ್ರಸ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
‘ಆರ್.ಟಿ.ನಗರದಲ್ಲಿರುವ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಯುವತಿ ವಾಸವಿದ್ದಳು’ ಎಂಬ ಮಾಹಿತಿ ಆಧರಿಸಿ ಪೊಲೀಸರು, ಪೇಯಿಂಗ್ ಗೆಸ್ಟ್ ಕಟ್ಟಡಗಳಿಗೆ ಹೋಗಿ ಮಾಲೀಕರನ್ನು ಹಾಗೂ ವಾಸಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿರುವ ಹೆಬ್ಬಾಳ, ಆರ್.ಟಿ.ನಗರ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿರುವ ಹಲವು ಕಟ್ಟಡಗಳಲ್ಲಿ ಈಗಾಗಲೇ ಹುಡುಕಾಟ ನಡೆಸಲಾಗಿದ್ದು, ಸಂತ್ರಸ್ತೆ ಮಾತ್ರ ಪತ್ತೆಯಾಗಿಲ್ಲ. ಸಂತ್ರಸ್ತೆ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಿರಲಿಲ್ಲ. ಬದಲಿಗೆ, ಆರ್.ಟಿ.ನಗರದ ನಿವಾಸಿಯೊಬ್ಬರ ಬಹುಮಹಡಿ ಕಟ್ಟಡದಲ್ಲಿದ್ದ ಕೊಠಡಿಯಲ್ಲಿ ನೆಲೆಸಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.
‘ದಿನೇಶ್ ದೂರು ನೀಡುವುದಕ್ಕೂ ಮುನ್ನಾದಿನವೇ ಯುವತಿ, ಕೊಠಡಿ ತೊರೆದಿದ್ದಾರೆ. ನಗರ ಹಾಗೂ ರಾಜ್ಯ
ವನ್ನೇ ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಅವರ ಕುಟುಂಬದವರನ್ನು ಸಂಪರ್ಕಿ
ಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸಂತ್ರಸ್ತೆ ಅಥವಾ ಅವರ ಜೊತೆ ಸಂಪರ್ಕದಲ್ಲಿರುವ ಕುಟುಂಬದವರ ಹೇಳಿಕೆ ಸಿಗಬೇಕಿದೆ. ಬಳಿಕವೇ ಎಫ್‌ಐಆರ್ ದಾಖಲಾತಿ ಪ್ರಕ್ರಿಯೆಆರಂಭಿಸಲಾಗುವುದು’ ಎಂದೂ ಮೂಲಗಳು ತಿಳಿಸಿವೆ.
ದಿನೇಶ್, ರಾಜಶೇಖರ್ ವಿರುದ್ಧ ದೂರು: ‘ತಮ್ಮ ಬಳಿ ಹಲವರ ಸಿ.ಡಿ. ಇರುವುದಾಗಿ ಹೇಳುತ್ತಿರುವ ದಿನೇಶ್ ಕಲ್ಲಹಳ್ಳಿ ಹಾಗೂ ರಾಜಶೇಖರ್ ಮುಲಾಲಿ, ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಅವರಿಬ್ಬರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ’ ಎಂದು ಮಾನವ ಹಕ್ಕುಗಳ ಸೇವಾ ಸಮಿತಿಯ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಎಚ್. ಇಂದಿರಾ, ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.