ADVERTISEMENT

ಸಂವಿಧಾನದ ಮೂಲ ತತ್ವಗಳನ್ನು ಸಾಕಾರಗೊಳಿಸಲು UCC ಜಾರಿಗೆ ಕ್ರಮ ವಹಿಸಿ: ಹೈಕೋರ್ಟ್

‘ಕೇಂದ್ರ–ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ಪ್ರಯತ್ನ ಮಾಡಬೇಕು’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 15:54 IST
Last Updated 5 ಏಪ್ರಿಲ್ 2025, 15:54 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸಂವಿಧಾನದ ಮೂಲ ತತ್ವಗಳನ್ನು ಸಾಕಾರಗೊಳಿಸಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಅಗತ್ಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರ ಅನುಷ್ಠಾನಕ್ಕೆ ಎಲ್ಲ ಪ್ರಯತ್ನ ಮಾಡಬೇಕು’ ಎಂದು ಹೈಕೋರ್ಟ್‌ ಸಲಹೆ ನೀಡಿದೆ.

ಮುಸ್ಲಿಂ ಕುಟುಂಬವೊಂದರ ಆಸ್ತಿ ಪಾಲು ದಾವೆಯೊಂದಕ್ಕೆ ಸಂಬಂಧಿಸಿ ಬೆಂಗಳೂರಿನ ವಿವೇಕ ನಗರದ ಸಮೀವುಲ್ಲಾ ಖಾನ್‌ (73) ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಈ ಅಂಶವನ್ನು ಪ್ರತಿಪಾದಿಸಿದೆ.

‘ಮುಸ್ಲಿಂ ಮಹಿಳೆಯರಿಗೆ ಆಸ್ತಿಯಲ್ಲಿ ಪುರುಷರಷ್ಟೇ ಸಮಾನ ಪಾಲು ಇಲ್ಲ. ಹೀಗಾಗಿ, ಯುಸಿಸಿ ಜಾರಿಗೊಳಿಸುವ ಅಗತ್ಯವಿದೆ’ ಎಂದು ವಿವರಿಸಿರುವ ನ್ಯಾಯಪೀಠ, ಈ ದಿಸೆಯಲ್ಲಿ ಸಂವಿಧಾನ ಕರಡು ರಚನಾ ಸಮಿತಿ ಸಭೆಯ ಚರ್ಚೆಯನ್ನು ಉಲ್ಲೇಖಿಸಿದೆ.

ADVERTISEMENT

‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌, ಬಾಬು ರಾಜೇಂದ್ರ ಪ್ರಸಾದ್‌, ಟಿ.ಟಿ. ಕೃಷ್ಣಮಾಚಾರಿ ಅಂತಹವರೆಲ್ಲಾ ಯುಸಿಸಿ ಬೆಂಬಲಿಸಿದ್ದರು’ ಎಂದು ಹೇಳಿದೆ.

‘ಸಂವಿಧಾನದ ಮೂಲಭೂತ ಅಂಶಗಳಾದ ಪ್ರಜಾಪ್ರಭುತ್ವ, ಏಕತೆ, ಸಮಗ್ರತೆ ಮತ್ತು ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾರ್ಯಗತಗೊಳಿಸಲು ಸಂವಿಧಾನದ ಕಲಂ 44ನೇ ವಿಧಿಯ ಆಶಯದಂತೆ ಯುಸಿಸಿ ಜಾರಿಗೊಳಿಸಬೇಕಾದ ಅಗತ್ಯವಿದೆ’ ಎಂದೂ ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.