ADVERTISEMENT

‘ಸಮವಸ್ತ್ರ: ಅಧಿಕಾರಿ ಜೈಲಿಗಟ್ಟಿದರೆ ಗೊತ್ತಾಗುತ್ತೆ’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 18:08 IST
Last Updated 14 ಫೆಬ್ರುವರಿ 2023, 18:08 IST
   

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಕಾಲು ಚೀಲ ವಿತರಿಸಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ನೀಡದ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ‘ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದರೆ ಎಲ್ಲ ಸರಿಹೋಗುತ್ತದೆ’ ಎಂದು ಕಿಡಿಕಾರಿದೆ.

ಈ ಸಂಬಂಧ ಕೊಪ್ಪಳ ಜಿಲ್ಲೆಯ ಮಾಸ್ಟರ್ ಮಂಜುನಾಥ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಸರ್ಕಾರದ ಉನ್ನತ ಅಧಿಕಾರಿಯೊಬ್ಬರನ್ನು ಜೈಲಿಗೆ ಕಳುಹಿಸಿದಾಗ ಜನರಿಗೆ ನಮ್ಮನ್ನು ಕಾಪಾಡಲು ನ್ಯಾಯಾಲಯವಿದೆ ಎಂಬುದು ಗೊತ್ತಾಗುತ್ತದೆ. ಆದರೇನು, ಮಾನ ಮಾರ್ಯದೆ ಇಲ್ಲದ ಅಧಿಕಾರಿಗಳು ಆರು ತಿಂಗಳಾದರೂ ಸರಿಯೇ ಜೈಲಿಗೆ ಹೋಗಿಬರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿತು.

ADVERTISEMENT

‘ಸಮವಸ್ತ್ರ ಖರೀದಿಸಲು ರಾಜ್ಯ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಎಷ್ಟು ಹಣ ಸದ್ಬಳಕೆಯಾಗಿದೆ ಎಂಬ ಬಗ್ಗೆ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ) ಪರಿಶೀಲನೆ ನಡೆಸಬೇಕು. 2019–20ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ಮತ್ತು ಶೂ, ಕಾಲು ಚೀಲ ವಿತರಣೆ ಮಾಡುವ ಮೂಲಕ ಸರ್ಕಾರವು ಹೈಕೋರ್ಟ್‌ನ 2019ರ ಆಗಸ್ಟ್ 28ರ ತೀರ್ಪು ಪಾಲಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಾತರಿಪಡಿಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.