ADVERTISEMENT

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋರ ಅನ್ಯಾಯ: ಕುಮಾರ್‌ ನಾಯಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:08 IST
Last Updated 29 ಜುಲೈ 2024, 16:08 IST
   

ನವದೆಹಲಿ: ‘ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡದೆ ಘೋರ ಅನ್ಯಾಯ ಎಸಗಲಾಗಿದೆ. ಇದೊಂದು ತಾರತಮ್ಯದ ಬಜೆಟ್‌’ ಎಂದು ರಾಯಚೂರು ಸಂಸದ ಜಿ.ಕುಮಾರ್‌ ನಾಯಕ ಆಕ್ರೋಶ ವ್ಯಕ್ತಪಡಿಸಿದರು. 

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಸೋಮವಾರ ಮಾತನಾಡಿದ ಅವರು, ‘ದೇಶದಲ್ಲಿ ಅತೀ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಾವು ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ₹1 ಕೊಟ್ಟರೆ ವಾಪಸ್‌ ಬರುವುದು 24 ಪೈಸೆ ಮಾತ್ರ. ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ’ ಎಂದು ದೂರಿದರು. 

‘ಬೆಂಗಳೂರಿನಲ್ಲಿ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ದೊಡ್ಡ ಮೊತ್ತದ ಹೂಡಿಕೆ ಬೇಕಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ನೆರವು ನೀಡಬೇಕು. ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ’ ಎಂದರು. 

ADVERTISEMENT

‘ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳು. ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿವೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ 2021–22ರಲ್ಲಿ ಏಮ್ಸ್‌ ಮಂಜೂರು ಮಾಡಿತ್ತು. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಹಲವು ಸಲ ಮನವಿ ಮಾಡಲಾಗಿತ್ತು. ಆದರೆ, ಈ ವರೆಗೂ ಘೋಷಣೆ ಮಾಡಿಲ್ಲ. ಜಿಲ್ಲೆಗೆ ಶೀಘ್ರದಲ್ಲಿ ಏಮ್ಸ್‌ ಮಂಜೂರು ಮಾಡಬೇಕು. ಜತೆಗೆ, ರಾಯಚೂರಿನಲ್ಲಿ ವಿಮಾನ ನಿಲ್ದಾಣ ಆರಂಭಿಸಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.