ADVERTISEMENT

ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗದಲ್ಲಿ ಪದವಿ ಅಧ್ಯಾಪಕರ ಬೋಧನೆ

ಚಂದ್ರಹಾಸ ಹಿರೇಮಳಲಿ
Published 17 ಜನವರಿ 2026, 0:56 IST
Last Updated 17 ಜನವರಿ 2026, 0:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಗೆಟ್ಟಿ ಚಿತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅನುಭವಿ ಅಧ್ಯಾಪಕರನ್ನು ಸೇವಾ ಜ್ಯೇಷ್ಠತೆಯ ಆಧಾರದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಿಗೆ ಗರಿಷ್ಠ ಐದು ವರ್ಷ ನಿಯೋಜನೆ ಮೇಲೆ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ADVERTISEMENT

ಉನ್ನತ ಶಿಕ್ಷಣ ಬಲಗೊಳಿಸಲು ಹಲವು ಸುಧಾರಣಾ ಕ್ರಮಗಳನ್ನು ರೂಪಿಸಲಾಗಿದೆ. ಆದರೆ, ವಿಶ್ವವಿದ್ಯಾಲಯಗಳಿಗೆ ಕಾಲಕಾಲಕ್ಕೆ ಅಗತ್ಯವಿರುವ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳದ ಕಾರಣ ಸ್ನಾತಕೋತ್ತರ ವಿಭಾಗಗಳಲ್ಲಿ ನುರಿತ ಅಧ್ಯಾಪಕರ ಕೊರತೆ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಿದೆ. ಇದನ್ನು ನೀಗಿಸಲು ಪದವಿ ಕಾಲೇಜುಗಳ ನುರಿತ ಅಧ್ಯಾಪಕರ ಸೇವೆಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವ ಸೂತ್ರ ರೂಪಿಸಿದೆ.   

ಸ್ಪರ್ಧಾ ಪರೀಕ್ಷೆಗಳ ಮೂಲಕ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡು ನಿರಂತರ ಸಂಶೋಧನೆ, ಅನುಭವದ ಆಧಾರದಲ್ಲಿ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಪಡೆದ ಪರಿಣತರಿಗೆ ಆದ್ಯತೆ ನೀಡಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಈ ಪಟ್ಟಿ ಆಧಾರದಲ್ಲಿ ಆಯಾ ವಿಶ್ವವಿದ್ಯಾಲಯಗಳು ತಮಗೆ ಅಗತ್ಯವಿರುವ ವಿಷಯಗಳ ಅಧ್ಯಾಪಕರ ಸೇವೆ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಬೇಡಿಕೆ ಸಲ್ಲಿಸುವ ವಿಶ್ವವಿದ್ಯಾಲಯಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಶೇ15ರಷ್ಟು ಅಧ್ಯಾಪಕರನ್ನು ನಿಯೋಜನೆ ಮಾಡಲಿದೆ.

ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ಹಾಗೂ ಸ್ನಾತಕೋತ್ತರ ವಿಭಾಗಗಳ ಬೋಧಕ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳ ಅಧ್ಯಾಪಕ ವೃಂದ ಸರ್ಕಾರ ಹಾಗೂ ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಮನವಿ ಮಾಡಿದ್ದರು. 

ರಾಜ್ಯದಲ್ಲಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ 2007ರಿಂದಲೂ ಬೋಧಕ ಸಿಬ್ಬಂದಿ ನೇಮಕಾತಿ ನಡೆದಿಲ್ಲ. ವಿವಿಧ ವಿಭಾಗಗಳಲ್ಲಿ ಶೇ 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ದಶಕಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯದ ಕಾರಣ ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ವಿವಿಧ ಕಾಲೇಜುಗಳ ಸಂಯೋಜನೆ. ಪರೀಕ್ಷೆ, ಇತರೆ ಶುಲ್ಕಗಳಿಂದ ಬರುತ್ತಿರುವ ಆದಾಯ‌ವು ಪಿಂಚಣಿ, ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ನೌಕರರ ವೇತನ–ಭತ್ಯೆ ಭರಿಸುವುದಕ್ಕೆ ಸಾಲುತ್ತಿಲ್ಲ. ಹಳೆಯ ವಿಶ್ವವಿದ್ಯಾಲಯಗಳಿಗೆ ನಿವೃತ್ತರ ಪಿಂಚಣಿಗಳೇ ಭಾರ ಹೆಚ್ಚಾಗಿದೆ. ಜಿಲ್ಲೆಗೊಂದರಂತೆ ವಿಶ್ವವಿದ್ಯಾಲಯಗಳ ಸ್ಥಾಪನೆ ಪರಿಣಾಮ ಹಳೇ ವಿಶ್ವವಿದ್ಯಾಲಯಗಳಿಗೆ ಸಂಯೋಜಿತ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿ, ಆದಾಯದ ಕೊರತೆ ಕಾಡುತ್ತಿದೆ. ಸರ್ಕಾರದ ಅನುದಾನ ನಿರೀಕ್ಷೆಯಂತೆ ಸಿಗದೆ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಶೇ 90ರಷ್ಟು ವಿಶ್ವವಿದ್ಯಾಲಯಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಅವುಗಳಿಗೆ ನೆರವು ನೀಡುವ ಪ್ರಕ್ರಿಯೆಯನ್ನೂ ಉನ್ನತ ಶಿಕ್ಷಣ ಇಲಾಖೆ ಆರಂಭಿಸಿದೆ.  

ರಾಯಚೂರು, ಗುಲ್ಬರ್ಗಾ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯಗಳ ಕುಲಪತಿ ನೇಮಕಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈಚೆಗೆ ರಚಿಸಲಾಗಿದ್ದ ಶೋಧನಾ ಸಮಿತಿಗಳು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನಷ್ಟೇ ಪರಿಗಣಿಸಿ, ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರ ಅರ್ಜಿಗಳನ್ನು ತಿರಸ್ಕರಿಸಿರುವುದು ವಿವಾದಕ್ಕೆ ನಾಂದಿ ಹಾಡಿತ್ತು.  

ಯುಜಿಸಿ ನಿಯಮದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪರಿಗೂ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ. ವಿಶ್ವವಿದ್ಯಾಲಯಗಳಿಗೆ ನಿಯೋಜನೆ ಮಾಡಿದರೆ ಹುದ್ದೆಯ ಘನತೆ ಹೆಚ್ಚಾಗುತ್ತದೆ 
ಟಿ.ಎಂ.ಮಂಜುನಾಥ್‌ ಅಧ್ಯಕ್ಷ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ

ನಿವೃತ್ತರು ಪರಿಣತರ ಸೇವೆ ಬಳಕೆ

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಉನ್ನತ ಶಿಕ್ಷಣ ಇಲಾಖೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಬೋಧಕರಾಗಿ ನಿವೃತ್ತರಾದ ಅನುಭವಿ ಅಧ್ಯಾಪಕರು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ತಜ್ಞರನ್ನು ವಿಶೇಷ ಅತಿಥಿ ಉಪನ್ಯಾಸಕರಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಪತ್ರಿಕೋದ್ಯಮ ಇತಿಹಾಸ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಕೆಲಸದ ಮೂಲಕ ಸಾಕಷ್ಟು ಅನುಭವ ಇರುವ ಪತ್ರಕರ್ತರು ಇತಿಹಾಸ ತಜ್ಞರು ಎಂಜನಿಯರ್‌ಗಳಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಅನುಭವ ಸಿಗುತ್ತದೆ. ಒಪ್ಪಿಗೆ ನೀಡಿ ಬೋಧನೆಗೆ ಸಮಯ ನೀಡುವ ಅವರಿಗೆ ವಿಶೇಷ ಗೌರವ ಸಂಭಾವನೆ ನಿಗದಿ ಮಾಡಲು ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.