ಹೈಕೋರ್ಟ್
ಬೆಂಗಳೂರು: ‘ಕೆಜಿಎಫ್‌ನಲ್ಲಿ ಅಂಬೇಡ್ಕರ್ ವಸ್ತು ಸಂಗ್ರಹಾಲಯ, ಸಂಶೋಧನಾ ಸಂಸ್ಥೆ ಮತ್ತು ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ವಸತಿಹೀನರಿಗಾಗಿ ಜಮೀನು ಮಂಜೂರಾಗಿದ್ದ ಆದೇಶವನ್ನು ಹಿಂಪಡೆದಿರುವ ಕೋಲಾರ ಜಿಲ್ಲಾಧಿಕಾರಿಯ ಕ್ರಮ, ಸರ್ಕಾರವೇ ಅನುಸರಿಸುತ್ತಿರುವ ಅಸ್ಪೃಶ್ಯತೆಗೆ ಉದಾಹರಣೆಯಾಗಿದೆ’ ಎಂದು ಈ ಸಂಬಂಧದ ಅರ್ಜಿದಾರರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
ಈ ಕುರಿತಂತೆ ಕೆಜಿಎಫ್‌ನ ಶಿವಗಾಮಿ (60) ಸೇರಿದಂತೆ ಒಟ್ಟು 24 ಜನರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್.ವೆಂಕಟೇಶ ದೊಡ್ಡೇರಿ, ‘ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ಪಟ್ಟಣ ಪ್ರದೇಶದಲ್ಲಿ ರಸ್ತೆ ಬದಿ ವಾಸವಾಗಿರುವ ವಸತಿಹೀನ ದಿನಗೂಲಿ ಕಾರ್ಮಿಕರಿಗೆ ವಿಶೇಷ ವರ್ಗದ ಅಡಿ ಸರ್ಕಾರಿ ಜಮೀನಿನಲ್ಲಿ ಪುನರ್ವಸತಿ ಕಲ್ಪಿಸಲು ಮಂಜೂರಾಗಿದ್ದ 9 ಎಕರೆ ಜಮೀನನ್ನು ಹಿಂಪಡೆಯಲಾಗಿದೆ. ಈ ಕುರಿತ ಜಿಲ್ಲಾಧಿಕಾರಿ ಆದೇಶವು ವಾಸ್ತವದಲ್ಲಿ ಸರ್ಕಾರವೇ ಅಸ್ಪೃಶ್ಯತೆ ಆಚರಿಸುವಂತಿದೆ’ ಎಂದು ದೂರಿದರು.
‘ಜಿಲ್ಲಾಧಿಕಾರಿಯ ಈ ನಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿಕ ಕೃತ್ಯವಾಗಿದೆ. ಅರ್ಜಿದಾರರ ನ್ಯಾಯಯುತ ಮನವಿಗೆ ಚ್ಯುತಿ ಉಂಟುಮಾಡಿರುವ ಪ್ರಕರಣದ ಪ್ರತಿವಾದಿಗಳನ್ನು ದೌರ್ಜನ್ಯ ತಡೆ ಕಾಯ್ದೆಯ ಕಲಂಗಳಡಿ ಶಿಕ್ಷಾರ್ಹ ಅಪರಾಧಗಳಿಗೆ ಗುರಿಪಡಿಸಬೇಕಾಗುತ್ತದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರ ಆಕ್ಷೇಪಣೆಗೆ ಸೂಕ್ತ ಕಾರಣ ನೀಡಿ ಇಲ್ಲವೇ ಕೋರ್ಟ್‌ಗೆ ಖುದ್ದು ಹಾಜರಾಗಿ’ ಎಂದು ಪ್ರಕರಣದ ಐದನೇ ಪ್ರತಿವಾದಿ ಕೋಲಾರ ಜಿಲ್ಲಾಧಿಕಾರಿಗೆ ಆದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?: ‘ಕೆಜಿಎಫ್ ತಾಲ್ಲೂಕು ರಾಬರ್ಟ್‌ಸನ್ ಪೇಟೆ ಹೋಬಳಿ, ಬಂಗಾರದ ಗಣಿ ಗ್ರಾಮದ ಸರ್ವೇ ನಂಬರ್ 2ರಲ್ಲಿ 9 ಎಕರೆ ಜಮೀನನ್ನು ಕೆಜಿಎಫ್ ಪಟ್ಟಣದ ರಸ್ತೆಬದಿ ವಾಸವಾಗಿರುವ ವಸತಿಹೀನ ದಿನಗೂಲಿ ಕಾರ್ಮಿರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನಿವೇಶನ ವಿತರಣೆಗಾಗಿ ಗುರುತಿಸಲಾಗಿತ್ತು. ಈ ಸಂಬಂಧ ಸರ್ಕಾರದ ಆದೇಶದಂತೆ ಕಂದಾಯ ದಾಖಲೆಗಳಲ್ಲಿ ನಮೂದಿಸಿ 2023ರಲ್ಲಿ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತಕ್ಕೆ ಒಪ್ಪಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಈ ಮಂಜೂರಾತಿ ಆದೇಶವನ್ನು 2024ರಲ್ಲಿ ಹಿಂಪಡೆದು ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಹಸ್ತಾಂತರ ಮಾಡಿದ್ದಾರೆ. ನಂತರ ಜಮೀನನ್ನು ಇತರೆಯವರಿಗೆ ಮಂಜೂರು ಮಾಡಿ ರುವುದು ಕಾನೂನು ಬಾಹಿರ ನಡೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.