ADVERTISEMENT

₹ 2 ಕೋಟಿ ವರೆಗಿನ ಕಾಮಗಾರಿ ಕೆಆರ್‌ಐಡಿಎಲ್‌ಗೆ ?

ಕೆಟಿಪಿಪಿಗೆ ತಿದ್ದುಪಡಿ ತರಲು ಮುಂದಾದ ಸರ್ಕಾರ

ಗುರು ಪಿ.ಎಸ್‌
Published 17 ಫೆಬ್ರುವರಿ 2021, 21:30 IST
Last Updated 17 ಫೆಬ್ರುವರಿ 2021, 21:30 IST
ಎಲ್.ಕೆ. ಅತೀಕ್
ಎಲ್.ಕೆ. ಅತೀಕ್   

ಬೆಂಗಳೂರು: ಟೆಂಡರ್‌ ಕರೆಯದೇ ₹2 ಕೋಟಿ ಮೊತ್ತದವರೆಗಿನ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆಗೆ (ಕೆಟಿಪಿಪಿ ಕಾಯ್ದೆ) ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಈ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಮತ್ತು ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿವೆ. ಆದರೂ ಈ ಪ್ರಸ್ತಾವವನ್ನು ಗುರುವಾರ (ಫೆ.18) ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದಿಡಲು ಸರ್ಕಾರ ಮುಂದಾಗಿದೆ.

ಕೆಆರ್‌ಐಡಿಎಲ್‌ ನಡೆಸುವ ಕಾಮಗಾರಿಗಳಿಗೆ ಕೆಟಿಟಿಪಿ ಕಾಯ್ದೆಯ 4ಜಿ ಕಲಂ ಅಡಿ ವಿನಾಯಿತಿ ನೀಡುವುದಕ್ಕೆ ಪೂರಕವಾಗಿ ಕಾಯ್ದೆಗೆ ತಿದ್ದುಪಡಿ ತರದೇ ಇದ್ದರೆ, ನಿಗಮವು ಆರ್ಥಿಕವಾಗಿ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆ ಹಾಗೂ ಆರ್ಥಿಕ ಸ್ಥಿತಿ ಸುಧಾರಣೆ ಕಾರ್ಯವನ್ನು ನಿಗಮ ಮಾಡುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ಈ ಉದ್ದೇಶವನ್ನು ಇನ್ನಷ್ಟು ಸಮರ್ಪಕವಾಗಿ ಈಡೇರಿಸಲು ಸಾಧ್ಯವಾಗುತ್ತದೆ ಎಂದು ಇಲಾಖೆ ತನ್ನ ಪ್ರಸ್ತಾವವನ್ನು ಸಮರ್ಥಿಸಿಕೊಂಡಿದೆ.

ADVERTISEMENT

ವಿರೋಧ: ‘ಕೆಆರ್‌ಐಡಿಎಲ್‌ ಸಂಸ್ಥೆಗೆ ಮಾತ್ರ ಈ ರೀತಿ ವಿನಾಯಿತಿ ನೀಡುವುದು ಸಂವಿಧಾನದ 14ನೇ ಅನುಚ್ಚೇದಕ್ಕೆ ವಿರುದ್ಧ. ಸರ್ಕಾರದ ಒಂದು ಅಂಗ ಸಂಸ್ಥೆಗೆ ಇಂತಹ ವಿನಾಯಿತಿ ನೀಡಿದರೆ, ಉಳಿದ ಸಂಸ್ಥೆಗಳಿಗೂ ನೀಡಬೇಕಾಗುತ್ತದೆ. ಕಾಯ್ದೆಯ ಮೂಲ ಉದ್ದೇಶಕ್ಕೂ ಇದರಿಂದ ಧಕ್ಕೆಯಾಗುತ್ತದೆ’ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ.

‘ಕಾಯ್ದೆಯ ಪ್ರಕಾರ, ₹50 ಲಕ್ಷಗಳವರೆಗೆ ಕಾಮಗಾರಿಗಳಲ್ಲಿ ಶೇ 24.10ರಷ್ಟು ಕಾಮಗಾರಿಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕಿದೆ. ಪ್ರಸ್ತಾವಿತ ತಿದ್ದುಪಡಿ ಮಾಡಿದ್ದೇ ಆದರೆ ಈ ನಿಯಮದ ಉಲ್ಲಂಘನೆ ಆಗಲಿದೆ. ಹಾಗಾಗಿ ತಿದ್ದುಪಡಿ ಪ್ರಸ್ತಾವವನ್ನು ಮರುಪರಿಶೀಲಿಸಬೇಕು’ ಎಂದೂ ಸಲಹೆ ನೀಡಿದೆ.

ಗುತ್ತಿಗೆದಾರರು ಬೀದಿಪಾಲು: ‘ಕಾಮಗಾರಿ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ಟೆಂಡರ್‌ ನೀಡುವಾಗ ಸ್ಪರ್ಧೆ ಇರಬೇಕು ಎಂಬ ಉದ್ದೇಶದಿಂದಲೇ ಕೆಟಿಪಿಪಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಈಗ ಕೆಆರ್‌ಐಡಿಎಲ್‌ಗೆ 4ಜಿ ಅಡಿ ವಿನಾಯಿತಿ ನೀಡಿದರೆ ಕಾಯ್ದೆಯ ಉದ್ದೇಶವೇ ವಿಫಲವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಎಸ್‌.ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹಾದೇವಸ್ವಾಮಿ ಕಳವಳ ವ್ಯಕ್ತಪಡಿಸಿದರು.

‘₹2 ಕೋಟಿಗಿಂತ ಕಡಿಮೆ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳುವವರು ಸಣ್ಣ ಗುತ್ತಿಗೆದಾರರೇ. ಅದರಲ್ಲಿಯೂ ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಯ್ದೆ ತಿದ್ದುಪಡಿ ಜಾರಿಯಾದರೆ, ಯಾರಿಗೆ ಬೇಕಾದರೂ ಕಾಮಗಾರಿ ವಹಿಸಬಹುದು. ಇದರಿಂದ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಬೇಕಾಗುತ್ತದೆ’ ಎಂದರು.

‘ಗ್ರಾಮೀಣ ಭಾಗದಲ್ಲಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಯುವುದಿಲ್ಲ. ಟೆಂಡರ್‌ ಕರೆಯದೇ ಕೈಗೆತ್ತಿಕೊಳ್ಳುವ ಕಾಮಗಾರಿಗಳು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತವೆ’ ಎಂದೂ ಎಚ್ಚರಿಸಿದರು.

‘ಹಣಕಾಸು ಇಲಾಖೆ ವಿವೇಚನೆಗೆ’
‘ಕೆಆರ್‌ಐಡಿಎಲ್‌ ವರ್ಷಕ್ಕೆ ₹3,500 ಕೋಟಿ ಮೊತ್ತದ ಕಾಮಗಾರಿ ನಡೆಸುತ್ತದೆ. 4ಜಿ ವಿನಾಯಿತಿ ದೊರೆಯದೆ ಇದ್ದರೆ ನಿಗಮವು ಭಾರಿ ಆರ್ಥಿಕ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವ ಸಲ್ಲಿಸಲಾಗಿತ್ತು. ಇದನ್ನು ಒಪ್ಪುವುದು, ಬಿಡುವುದು ಹಣಕಾಸು ಇಲಾಖೆಯ ವಿವೇಚನೆಗೆ ಬಿಟ್ಟದ್ದು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾನೂನು ತೊಡಕು ನಿವಾರಿಸುವ ಉದ್ದೇಶದಿಂದ ಈ ಪ್ರಸ್ತಾವ ಸಲ್ಲಿಸಲಾಗಿದೆ. ಸಚಿವ ಸಂಪುಟದ ಮುಂದೆ ಗುರುವಾರ ಈ ವಿಷಯ ಚರ್ಚೆಗೆ ಬರಲಿದೆ. ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.