ADVERTISEMENT

ಎಸ್‌ಟಿ ಪಟ್ಟಿಗೆ ಸೇರಿಸಿ: ಉಪ್ಪಾರರ ಮನವಿ

ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಮುದಾಯ: ಸೌಲಭ್ಯಕ್ಕೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 20:15 IST
Last Updated 10 ಫೆಬ್ರುವರಿ 2019, 20:15 IST
ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರ ಶ್ರೀಕ್ಷೇತ್ರದಲ್ಲಿ ಭಾನುವಾರ ನಡೆದ ಭಗೀರಥ ಜಯಂತಿಯಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಶಾಸಕ ಟಿ.ರಘುಮೂರ್ತಿ, ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಸಚಿವ ಎಚ್‌.ಆಂಜನೇಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಪುರುಷೋತ್ತಮಾನಂದಪುರಿ ಸ್ವಾಮೀಜಿ ಇದ್ದಾರೆ
ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರ ಶ್ರೀಕ್ಷೇತ್ರದಲ್ಲಿ ಭಾನುವಾರ ನಡೆದ ಭಗೀರಥ ಜಯಂತಿಯಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಶಾಸಕ ಟಿ.ರಘುಮೂರ್ತಿ, ಸಂಸದ ಬಿ.ಎನ್‌.ಚಂದ್ರಪ್ಪ, ಮಾಜಿ ಸಚಿವ ಎಚ್‌.ಆಂಜನೇಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಪುರುಷೋತ್ತಮಾನಂದಪುರಿ ಸ್ವಾಮೀಜಿ ಇದ್ದಾರೆ   

ಬ್ರಹ್ಮವಿದ್ಯಾನಗರ (ಹೊಸದುರ್ಗ): ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಭಗೀರಥ ಪೀಠದ ಪುರುಷೋತ್ತಮಾ ನಂದಪುರಿ ಸ್ವಾಮೀಜಿ ಕೋರಿಕೆ ಸಲ್ಲಿಸಿದರು.

ಹೊಸದುರ್ಗ ತಾಲ್ಲೂಕಿನ ಸುಕ್ಷೇತ್ರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಭಗೀರಥ ಜಯಂತ್ಯುತ್ಸವ ಹಾಗೂ ಸ್ವಾಮೀಜಿಯ ಪಟ್ಟಾಭಿಷೇಕದ 19ನೇ ವಾರ್ಷಿಕೋತ್ಸವಕ್ಕೆ ಹಾಜರಾಗಿದ್ದ ರಾಜಕೀಯ ಮುಖಂಡರ ಎದುರು ಸಮುದಾಯದ ಪರ ಈ ಬೇಡಿಕೆ ಮುಂದಿಟ್ಟರು.

‘ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವನ್ನು ಬಡತನ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬರಾಗಲು ಸಾಕಷ್ಟು ಶ್ರಮಮಿಸುತ್ತಿದ್ದೇವೆ. ಆದರೆ, ಮೀಸಲಾತಿ ಸೌಲಭ್ಯ ಸಿಗದಿರುವ ಕಾರಣ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ’ ಎಂದು ಸಮುದಾಯದ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಿದರು.

ADVERTISEMENT

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ ನೀಡುವ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಹೊಣೆ ಮಾತ್ರ ರಾಜ್ಯ ಸರ್ಕಾರದ ಮೇಲಿದೆ. ಈ ಕಾರ್ಯವನ್ನು ಸಮ್ಮಿಶ್ರ ಸರ್ಕಾರ ಮಾಡಲಿದೆ’ ಎಂದು ಭರವಸೆ ನೀಡಿದರು.

‘ಉಪ್ಪಾರ ಸಮುದಾಯದ ಪುಟ್ಟರಂಗಶಟ್ಟಿ ಸಚಿವರಾಗಿ ಏಳು ತಿಂಗಳು ಕಳೆದಿವೆ. ಆಗಲೇ ಅವರ ಕಾಲು ಎಳೆಯುವ ಹುನ್ನಾರ ನಡೆಯುತ್ತಿದೆ. ನೀವು ಎಚ್ಚರದಿಂದ ಇರುವ ಅಗತ್ಯವಿದೆ. ದುಡ್ಡು ಇಲ್ಲ ಎಂಬ ಸಬೂಬು ಹೇಳದೇ ಮಠಕ್ಕೆ ಹಣಕಾಸಿನ ನೆರವು ನೀಡಿ. ಸರ್ಕಾರದ ಹಣವನ್ನು ಮಠಕ್ಕೆ ನೀಡುವುದಕ್ಕೆ ನಮ್ಮ ಬೆಂಬಲವಿದೆ’ ಎಂದು ಹೇಳಿದಾಗ ಭಕ್ತರು ಸಂಭ್ರಮಿಸಿದರು.

‘ಅಧಿಕಾರದ ಹುಚ್ಚು’

‘ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ. ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಸಂವಿಧಾನಬದ್ಧ ಸರ್ಕಾರದ ಅಸ್ಥಿರತೆಗೆ ಪ್ರಯತ್ನಿಸುತ್ತಿದ್ದಾರೆ. ಸರ್ಕಾರದ ಪತನಕ್ಕೆ ಅವರು ನಡೆಸುತ್ತಿರುವ ತಂತ್ರಕ್ಕೆ ತಕ್ಕ ಉತ್ತರ ನೀಡಲು ನಾವೂ ಸಜ್ಜಾಗಿದ್ದೇವೆ. ಬಿಜೆಪಿಯ ಷಡ್ಯಂತ್ರವನ್ನು ಶೀಘ್ರದಲ್ಲೇ ಬಯಲಿಗೆ ಎಳೆಯುತ್ತೇವೆ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ಅರಸು ಆಗದ ಚಾಂಪಿಯನ್‌’

‘ಹಿಂದುಳಿದ ವರ್ಗಗಳ ಚಾಂಪಿಯನ್‌ ಎಂದು ಹೇಳಿಕೊಂಡು ನಾಯಕರೊಬ್ಬರು ರಾಜ್ಯದಲ್ಲಿ ತಿರುಗಾಡುತ್ತಿದ್ದಾರೆ. ಸ್ವತಃ ದೇವರಾಜ ಅರಸು ಆಗುವುದಾಗಿ ಘೋಷಿಸಿಕೊಂಡಿದ್ದಾರೆ. ₹ 150 ಕೋಟಿ ಖರ್ಚು ಮಾಡಿ ಜಾತಿಗಣತಿ ನಡೆಸಿ, ವರದಿ ಬಿಡುಗಡೆ ಮಾಡದವರು ಹೇಗೆ ದೇವರಾಜ ಅರಸು ಆಗುತ್ತಾರೆ’.

ಸಿದ್ದರಾಮಯ್ಯ ನಿರ್ಗಮಿಸಿದ ಬಳಿಕ ಬಂದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌, ಅವರ ಹೆಸರನ್ನೇ ಹೇಳದೇ ಕುಟುಕಿದ ಪರಿ ಇದು.

‘ಹಿಂದುಳಿದ ಮಠಾಧಿಪತಿಯೊಬ್ಬರು ಜನರ ಪೂಜೆ ಮಾಡುವುದನ್ನು ಬಿಟ್ಟು ವ್ಯಕ್ತಿ ಪೂಜೆ ಮಾಡುತ್ತಿದ್ದಾರೆ. ಮಠಾಧೀಶರ ನಡವಳಿಕೆಯನ್ನು ಸಮಾಜ ಗಮನಿಸುತ್ತದೆ. ಮಠಾಧಿಪತಿಗಳು ರಾಜಕೀಯ ನಾಯಕರ ಆರಾಧನೆ ಮಾಡುವುದು ತಪ್ಪು’ ಎಂದು ಟೀಕೆ ಮಾಡಿದರು.

* ರಾಜ್ಯ ರಾಜಕಾರಣ ಕವಲು ದಾರಿಯಲ್ಲಿದೆ. ವಿಧಾನಸೌಧ ದನದ ಜಾತ್ರೆಯಂತೆ ಕಾಣುತ್ತಿದೆ. ಶಾಸಕರು ಕೊರಳಿಗೆ ಬೆಲೆ ಹಾಕಿಕೊಂಡಿಲ್ಲ ಅಷ್ಟೇ.

-ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

* ಆಡಿಯೊದಲ್ಲಿರುವ ಧ್ವನಿ ತಮ್ಮದೆಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆಗೆ ಪ್ರಯತ್ನಿಸಿದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ.

-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.