ADVERTISEMENT

ಭದ್ರಾ ಮೇಲ್ದಂಡೆ | ಗುತ್ತಿಗೆದಾರರಿಗೆ ₹2400 ಕೋಟಿ ಬಾಕಿ: ಗೋವಿಂದ ಕಾರಜೋಳ

ನಯಾಪೈಸೆ ನೀಡದ ಕೈ ಸರ್ಕಾರ: ಕಾರಜೋಳ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 10:41 IST
Last Updated 20 ಮಾರ್ಚ್ 2025, 10:41 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಕಳೆದ ಒಂದೂವರೆ ವರ್ಷಗಳಲ್ಲಿ ನಯಾಪೈಸೆ ಅನುದಾನ ನೀಡಿಲ್ಲ. ಗುತ್ತಿಗೆದಾರರ ಬಾಕಿಯೇ ₹2400 ಕೋಟಿಯಷ್ಟು ಇದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು. 

ಲೋಕಸಭೆಯಲ್ಲಿ ಜಲಶಕ್ತಿ ಸಚಿವಾಲಯದ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನನ್ನ ಕ್ಷೇತ್ರ ನೀರಾವರಿ ವಂಚಿತ ಪ್ರದೇಶ. ಇಲ್ಲಿ ರೈತರು, ಅತಿ ಸಣ್ಣ ರೈತರು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿ ತಾಲ್ಲೂಕಿನಿಂದ 30 ರಿಂದ 40 ಸಾವಿರದಷ್ಟು ಜನರು ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಗೋವಾದಂತಹ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ’ ಎಂದರು. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹7,200 ಕೋಟಿ ಅನುದಾನ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಅನುದಾನ ಸ್ಥಗಿತಗೊಳಿಸಿದ್ದರಿಂದ ಕಾಮಗಾರಿಗಳೆಲ್ಲ ಸ್ಥಗಿತಗೊಂಡಿವೆ. ಗುತ್ತಿಗೆದಾರರು ಊರು ಬಿಟ್ಟು ಹೋಗುವ ಸ್ಥಿತಿ ಇದೆ. ಕೇಂದ್ರ ಸರ್ಕಾರವು ರೈತರ ನೆರವಿಗೆ ಧಾವಿಸಬೇಕು’ ಎಂದು ಅವರು ಮನವಿ ಮಾಡಿದರು. 

ADVERTISEMENT

‘ನೀರಿನಲ್ಲಿ ಫ್ಲೋರೈಡ್‌ ಅಂಶ ಜಾಸ್ತಿ ಇದೆ. ನೈಟ್ರೇಟ್‌ ಇದೆ. ಕಬ್ಬಿಣದ ಅಂಶ ಜಾಸ್ತಿ ಇರುವುದರಿಂದ ರೈತರು ಮತ್ತು ಬಡವರ ಆರೋಗ್ಯಕ್ಕೆ ಹಾನಿಯಾಗಿದೆ. ಭೂಮಿ ಒಳಗಿರುವ ನೀರು ವಿಷಪೂರಿತವಾಗಿದೆ. ನಮ್ಮ ಜನರು ಸಾಕಷ್ಟು ನೋವು ಅನುಭವಿಸುತ್ತಾ ಇದ್ದಾರೆ. ಕೇಂದ್ರ ಸರ್ಕಾರವು ಈ ಯೋಜನೆಗೆ 2023–24ನೇ ಬಜೆಟ್‌ನಲ್ಲಿ ₹5,300 ಕೋಟಿ ಅನುದಾನ ಘೋಷಣೆ ಮಾಡಿತ್ತು. ಈ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು. 

‘ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶದ ಜನರು ಐದು ದಶಕಗಳಿಂದ ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಐದು ದಶಕದ ಹೋರಾಟದ ಬಳಿಕ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯ ಮೂಲಕ ಮಧ್ಯ ಕರ್ನಾಟಕದ 2.25 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. 367 ಕೆರೆಗಳನ್ನು ತುಂಬಿಸಲಾಗುತ್ತದೆ. ಈ ಯೋಜನೆ ಜಾರಿಯಾದರೆ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಆಗಲಿದೆ. ಫ್ಲೋರೈಡ್‌ ಅಂಶ ಕಡಿಮೆಯಾಗಲಿದೆ. ಕೃಷಿ ಉತ್ಪನ್ನಗಳ ಇಳುವರಿ 3 ಪಟ್ಟು ಹೆಚ್ಚಳ ಆಗಲಿದೆ’ ಎಂದು ಅವರು ಗಮನ ಸೆಳೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.