ಬಿಜೆಪಿ, ಕಾಂಗ್ರೆಸ್
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ವಿಷಯದಲ್ಲಿ ರಾಜ್ಯ ಆಡಳಿತ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ, ಕೃಷ್ಣೆಗೆ ದ್ರೋಹ ಬಗೆದಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಬಳಸಿಕೊಂಡಿತ್ತು. ಕಾಂಗ್ರೆಸ್ ನಡಿಗೆ –ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆ ಹಮ್ಮಿಕೊಂಡು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಜಾಹೀರಾತುಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರು ಕೃಷ್ಣಾ ಯೋಜನೆಯ ವಿಚಾರದಲ್ಲಿ ಮಾತ್ರ ಅಕ್ಷರಶಃ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದೆ.
ಅಂದು ಕೃಷ್ಣೆಯ ಕಡೆಗೆ - ನಮ್ಮ ನಡಿಗೆ ಹೋರಾಟ ಕೈಗೊಂಡು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ ₹10,000 ಕೋಟಿ ಅನುದಾನ ನೀಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಭಾಷಣ ಬಿಗಿದಿದ್ದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕೃಷ್ಣೆಯನ್ನೇ ಮರೆತಿದ್ದಾರೆ ಎಂದು ಟೀಕಿಸಿದೆ.
‘ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ ₹10,000 ಕೋಟಿ ಮೀಸಲಿಟ್ಟು ಐದು ವರ್ಷಗಳಲ್ಲಿ ₹50,000 ಕೋಟಿ ವೆಚ್ಚ ಮಾಡಿ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಕೂಡಲ ಸಂಗಮನಾಥನ ಮೇಲೆ ಆಣೆ ಪ್ರಮಾಣ ಮಾಡಿ ಕಾಯಿಕಟ್ಟಿ ಕಾಂಗ್ರೆಸ್ ನಾಯಕರು ಪ್ರಮಾಣ ಮಾಡಿದ್ದರು. ಅಲ್ಲದೆ ಇಳಕಲ್ ನಗರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಕೃಷ್ಣೆಗಾಗಿ ₹50,000 ಕೋಟಿ ವ್ಯಯ ಮಾಡುವ ಬದ್ಧತೆ ಪ್ರಕಟಿಸಿದ್ದರು. ಆದರೆ, ಅಧಿಕಾರ ಸಿಗುತ್ತಿದ್ದಂತೆ ಯೂಟರ್ನ್ ಹೊಡೆದಿದ್ದಾರೆ’ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ₹50 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು, ಕೃಷ್ಣಾ ಯೋಜನೆಯೊಂದಕ್ಕೆ ಹೇಳಿದ್ದಲ್ಲ ಎಂದು ತಮ್ಮ ಹೇಳಿಕೆಯನ್ನೇ ಸಿದ್ದರಾಮಯ್ಯ ತಿರುಚಿದ್ದರು. ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್ಸಿನ ಟ್ಯಾಗ್ ಲೈನ್ ಅಷ್ಟೇ ಬಿಟ್ಟರೆ ಅಲ್ಲಿ ನಿಜಾಂಶ ಇಲ್ಲವೇ ಇಲ್ಲ’ ಎಂದು ಪಕ್ಷ ತಿಳಿಸಿದೆ.
ಗ್ಯಾರಂಟಿ ಯೋಜನೆಗಳಲ್ಲೂ ಷರತ್ತುಗಳನ್ನು ಹಾಕಿ ಯೋಜನೆಗಳನ್ನು ಸೀಮಿತಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಕಾಂಗ್ರೆಸ್ಸಿನ ಸುಳ್ಳುಗಳ ಪರದೆ ಕುಸಿಯುತ್ತಲೇ ಇದೆ, ಮುಂದೊಂದು ದಿನ ಕಾಂಗ್ರೆಸ್ ಇಂತಹ ಸುಳ್ಳುಗಳಿಂದಲೇ ಸಂಪೂರ್ಣ ನಾಶವಾಗಲಿದೆ ಎಂದು ಬಿಜೆಪಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.