ADVERTISEMENT

ಉಪ್ಪಿನಕಾಯಿ ಕದ್ದು ತಿನ್ನಬೇಡ ಎಂದು ಆಕೆ ತುಂಬಿದ ಜಾಡಿಯೊಂದನ್ನು ಕೈಗಿಟ್ಟಿದ್ದರು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 7:09 IST
Last Updated 31 ಡಿಸೆಂಬರ್ 2018, 7:09 IST
   

ಬೆಂಗಳೂರು:ನಟ ಲೋಕನಾಥ್ ಅವರಿಗೆ ರಾಜ್ಯದ ಜನರಲ್ಲಿ ‘ನಮ್ಮೊಳಗಿನವನು’ ಎನ್ನುವ ಇಮೇಜ್ ಇತ್ತು. ಈ ಇಮೇಜ್ ಸೃಷ್ಟಿಯಾಗಲು ದೊಡ್ಡ ಕಾರಣ ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಅವರು ಉಪ್ಪಿನಕಾಯಿ ಚಪ್ಪರಿಸಿದ್ದ ರೀತಿ. ತಮ್ಮ ಆತ್ಮೀಯರೊಂದಿಗೆ ಅವರು ಉಪ್ಪಿನಕಾಯಿ ಪ್ರಸಂಗವನ್ನು ಹಲವು ಬಾರಿ ಮೆಲುಕು ಹಾಕುತ್ತಿದ್ದರು. ಅವರದೇ ಮಾತಿನಲ್ಲಿ ಅವರಅನುಭವ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ...

‘ಭೂತಯ್ಯನ ಮಗ ಅಯ್ಯುಚಿತ್ರದಲ್ಲಿ ಉಪ್ಪಿನಕಾಯಿ ಚಪ್ಪರಿಸುವ ಪಾತ್ರ ಮಾಡಲು ಒಂಬತ್ತು ಬಾರಿ ಹಸಿಖಾರದಿಂದ ತಯಾರಿಸಿದ್ದ ಉಪ್ಪಿನಕಾಯಿ ತಿಂದಿದ್ದೆ. ಬೇರೆ ಯಾರೋ ಆ ಪಾತ್ರ ಮಾಡಬೇಕಿತ್ತು. ಆದರೆ ಸಿದ್ದಣ್ಣ (ನಿರ್ದೇಸಕ ಸಿದ್ದಲಿಂಗಯ್ಯ) ಆ ಪಾತ್ರವನ್ನು ನನಗೇ ಕೊಟ್ಟರು. ಉಪ್ಪಿನಕಾಯಿ ನೆಕ್ಕುವ ದೃಶ್ಯ ಇವತ್ತಿಗೂ ಎಲ್ಲರ ಮನಸ್ಸಿನಲ್ಲಿ ನಾಟಿ ನಿಂತಿದೆ ಎಂದರೆ ಅದಕ್ಕೆ ಕಾರಣ ನಾನಲ್ಲ ಸಿದ್ದಲಿಂಗಯ್ಯ. ಆ ದೃಶ್ಯ ಅಂತಿಮವಾಗಿ ಓಕೆ ಆಗಬೇಕಾದರೆ ಒಂಬತ್ತು ಬಾರಿ ಹಸಿಖಾರದ ಉಪ್ಪಿನಕಾಯಿಯನ್ನು ನೆಕ್ಕಿ ನೆಕ್ಕಿ ಅವರಿಗೆ ತೋರಿಸಿದ್ದೆ. ಕೊನೆಗೂ ಓಕೆ ಆಯ್ತು ಅನ್ನಿ.

‘ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿದ್ದರಿಂದ ಕಲಾಭಿಮಾನಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದೆ. ‘ಭೂತಯ್ಯನ ಮಗ ಅಯ್ಯು’ಚಿತ್ರದ ಪ್ರಚಾರಕ್ಕೆ ಮಂಡ್ಯಕ್ಕೆ ತೆರಳಿದ ಸಂದರ್ಭದಲ್ಲಿ ಸಿದ್ದಲಿಂಗಯ್ಯ, ವಿಷ್ಣುವರ್ಧನ್‌, ಎಂ. ಪಿ. ಶಂಕರ್‌ ನನ್ನ ಜತೆ ವೇದಿಕೆಯಲ್ಲಿದ್ದರು. ಆಗ ಮಹಿಳೆಯೊಬ್ಬರು ವೇದಿಕೆ ಸನಿಹ ಬಂದು ಜಾಡಿ ಉಪ್ಪಿನಕಾಯಿ ಕೊಟ್ಟು, ‘ಎಷ್ಟು ಬೇಕಾದರೂ ತಿನ್ನು. ಆದರೆ ಕದಿಯಬೇಡ’ಎಂದು ಬುದ್ಧಿ ಹೇಳಿದ್ದರು.

ADVERTISEMENT

‘ನಮ್ಮ ಅನ್ನದಾತರಾದ ಅಭಿಮಾನಿಗಳು ಕಲಾವಿದನನ್ನು ಅವನು ಮಾಡಿದ ಪಾತ್ರಗಳ ಮೂಲಕ ಪ್ರಶಂಸಿಸಿದರೆ ಅದಕ್ಕಿಂತ ಬೇರೆ ಪ್ರಶಸ್ತಿ ಬೇಕಿಲ್ಲ. ನನಗೆ ಅಂಥ ಖುಷಿ ಕೊಟ್ಟಿದ್ದು ಭೂತಯ್ಯನ ಮಗ ಅಯ್ಯು ಚಿತ್ರದ ಪಾತ್ರ. ಚಿತ್ರ ಶತದಿನ ಪೂರೈಸಿದ ಸಂಭ್ರಮದಲ್ಲಿ ಸಿದ್ದಲಿಂಗಯ್ಯನವರು ಚಿನ್ನದ ಸರ ಉಡುಗೊರೆ ನೀಡಿದ್ದರು. ಯಶಸ್ವಿ ಚಿತ್ರಗಳ ನಿರ್ದೇಶಕರೊಬ್ಬರು ತಮ್ಮ ಸಿನಿಮಾದ ಯಶಸ್ಸನ್ನು ತಂಡದೊಂದಿಗೆ ಹಂಚಿಕೊಳ್ಳುವುದಕ್ಕೆ ಸಿದ್ದಲಿಂಗಯ್ಯ ಅವರೇ ಉತ್ತಮ ಮಾದರಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.