ADVERTISEMENT

UPSC Exam | ಲೋಕಸೇವಾ ‍‍ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 0:36 IST
Last Updated 23 ಏಪ್ರಿಲ್ 2025, 0:36 IST
upsc
upsc   
ಕೇಂದ್ರ ಲೋಕಸೇವಾ ಆಯೋಗವು 2024ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ರಾಜ್ಯದ ಹಲವರು ಉತ್ತಮ ಸಾಧನೆ ಮಾಡಿದ್ದಾರೆ. ಕೆಲವರು ಹತ್ತಾರು ಎಡರು ತೊಡರುಗಳನ್ನು ಮೀರಿ ಉನ್ನತ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಸಾಧಕರ ಮಾಹಿತಿಗಳು ಇಲ್ಲಿವೆ

ಪದವಿ ಪಡೆದ ಕುಟುಂಬದ ಮೊದಲಿಗ

ಹೆಸರು: ಡಾ.ಸಚಿನ್‌ ಗುತ್ತೂರು,

ಊರು: ಕೋಡಿಯಾಲ ಹೊಸಪೇಟೆ, ರಾಣೆಬೆನ್ನೂರು ತಾಲ್ಲೂಕು

ADVERTISEMENT

ಹಿನ್ನೆಲೆ: ಇಟ್ಟಿಗೆ ವ್ಯಾಪಾರಿ ಬಸವರಾಜ ಗುತ್ತೂರು ಹಾಗೂ ವಿನೋದಾ ದಂಪತಿಯ ಪುತ್ರ ಡಾ.ಸಚಿನ್‌, ಪದವಿವರೆಗೆ ಶಿಕ್ಷಣ ಪಡೆದ ಕುಟುಂಬದ ಮೊದಲಿಗ. ಹರಿಹರ ತಾಲ್ಲೂಕಿನ ಮೈಸೂರು ಕಿರ್ಲೋಸ್ಕರ್‌ ಶಿಕ್ಷಣ ಸಂಸ್ಥೆಯಲ್ಲಿ (ಎಂಕೆಇಟಿ) 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಇವರು, ದಾವಣಗೆರೆಯ ವೈಷ್ಣವಿ ಚೇತನ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ  ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. 2019ರಿಂದ ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದು, 4ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.

ಅಭಿಪ್ರಾಯ: ‘ಮೂರು ಪ್ರಯತ್ನದಲ್ಲಿ ಯಶಸ್ಸು ಸಿಗದೇ ಇದ್ದಾಗ ಬೇಸರವಾಗಿತ್ತು. ಮುಖ್ಯ ಪರೀಕ್ಷೆ ಬರೆದರೂ ಸಂದರ್ಶನದವರೆಗೆ ತಲುಪಲು ಸಾಧ್ಯವಾಗಿರಲಿಲ್ಲ. ಮಾನಸಿಕವಾಗಿ ಕುಗ್ಗದೇ ತಪ್ಪುಗಳನ್ನು ಸರಿಪಡಿಸಿಕೊಂಡು ಮರಳಿ ಪ್ರಯತ್ನಿಸಿದೆ. ಯುಪಿಎಸ್‌ಸಿ ಭಯ ಹುಟ್ಟಿಸುವ ಪರೀಕ್ಷೆ ಖಂಡಿತ ಅಲ್ಲ. ಸರಿಯಾದ ಮಾರ್ಗದಲ್ಲಿ ಸಿದ್ಧತೆ ನಡೆಸಬೇಕು. ಏನನ್ನು ಓದಬೇಕು ಎಂಬುದನ್ನು ಅರ್ಥಮಾಡಿಕೊಂಡು ತಯಾರಿ ಮಾಡಬೇಕು’.

ಡಾ.ಸಚಿನ್‌ ಗುತ್ತೂರು,

ಅಧ್ಯಯನವೇ ಇಲ್ಲಿಗೆ ಕರೆತಂದಿದೆ

ಹೆಸರು: ಟಿ. ವಿಜಯ್ ಕುಮಾರ್

ಊರು: ಚೋರನೂರು, ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ 

ಹಿನ್ನೆಲೆ: ತಂದೆ ರೈತ ಟಿ. ಅಡವಿಯಪ್ಪ ಮತ್ತು ತಾಯಿ ಶಿಕ್ಷಕಿ ಮಣಿಯಮ್ಮ. ಶಾಲಾ ಶಿಕ್ಷಣವನ್ನು ಚೋರನೂರು ಗ್ರಾಮದಲ್ಲಿ ಮತ್ತು ಕೂಡ್ಲಿಗಿಯ ನವೋದಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಕೆಎಸ್‌ಪಿಎಸ್‌ ಪೂರ್ಣಗೊಳಿಸಿ ಡಿವೈಎಸ್ಪಿಯಾಗಿ ಕೊಪ್ಪಳ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. 2023ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ರೈಲ್ವೆ ಇಲಾಖೆಗೆ ಸೇರಿದರು. 2024ರಲ್ಲಿಯೂ ಅವರು ಉತ್ತೀರ್ಣರಾಗಿದ್ದಾರೆ.

ಅಭಿಪ್ರಾಯ: ಓದದೇ ಮುಂದೆ ಬರುತ್ತೇನೆ ಎನ್ನುವ ಕಾಲ ಇದಲ್ಲ. ಯಾವುದೇ ಕ್ಷೇತ್ರವಾದರೂ ಈಗ ಹೆಚ್ಚಿನ ಅಧ್ಯಯನ ಬೇಕೇ ಬೇಕು. ನಾನು ನನ್ನ ಪರೀಕ್ಷೆ ಗಳಿಗಾಗಿ ನಿತ್ಯ ಕನಿಷ್ಠ 4ರಿಂದ 10 ಗಂಟೆ ಓದುತ್ತಿದ್ದೆ. ಅಧ್ಯಯನವೇ ನನ್ನನ್ನು ಇಲ್ಲಿಗೆ ಕರೆತಂದಿದೆ. ಯಪಿಎಸ್‌ಸಿಯಲ್ಲಿ ನಾನು 8 ಬಾರಿ ಪ್ರಯತ್ನ ಮಾಡಿದ್ದೇನೆ.

ಟಿ. ವಿಜಯ್ ಕುಮಾರ್

ಐಎಫ್‌ಎಸ್‌ ಬಿಡಲ್ಲ

ಹೆಸರು: ಜಿ.ರಶ್ಮಿ

ಊರು: ಕನಕದಾಸನಗರ, ಮೈಸೂರು

ಹಾಲಿ ಹುದ್ದೆ: ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌)

ಹಿನ್ನೆಲೆ: ಕನಕದಾಸ ನಗರದ ಗಂಗರಾಮ್‌ ಹಾಗೂ ರತ್ಮಮ್ಮ ದಂಪತಿ ಪುತ್ರಿ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಕುವೆಂಪು ನಗರದ ಬಿಜಿಎಸ್‌ ಬಾಲಜಗತ್‌ ಶಾಲೆ. ಮರಿಮಲ್ಲಪ್ಪ ‍ಕಾಲೇಜಿನಲ್ಲಿ ಪಿಯು ಹಾಗೂ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಸಿವಿಲ್‌ ಪದವಿ. 

ಅಭಿಪ್ರಾಯ: ಪದವಿ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದೇನೆ. 2022ರಲ್ಲಿ ಐಎಫ್‌ಎಸ್‌ ಪರೀಕ್ಷೆ ಪಾಸು ಮಾಡಿದ್ದು, ಸದ್ಯ ಒಡಿಶಾ ರಾಜ್ಯದ ಖೊರ್ದಾ ಜಿಲ್ಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವೆ. ಇದೀಗ ಸಿವಿಲ್‌ ಸರ್ವೀಸ್‌ ಪರೀಕ್ಷೆಯಲ್ಲಿ 976ನೇ ರ‍್ಯಾಂಕ್ ಬಂದಿದೆ. ಐಎಫ್‌ಎಸ್‌ ಅಲ್ಲೇ ಮುಂದುವರಿಯುವೆ.

ಜಿ.ರಶ್ಮಿ

ಜವಾಬ್ದಾರಿಗಳ ಜೊತೆಗೆ ಪರೀಕ್ಷೆ ಪಾಸು

ಹೆಸರು: ಜೆ.ಭಾನುಪ್ರಕಾಶ್‌ 

ವಿದ್ಯಾರ್ಹತೆ: ಎಂಬಿಬಿಎಸ್‌, ಎಂ.ಡಿ

ಹಾಲಿ ಹುದ್ದೆ: ಐಪಿಎಸ್‌

ಊರು: ಬೆಳವಾಡಿ, ಮೈಸೂರು

ಹಿನ್ನೆಲೆ: ಕೃಷಿಕ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರ. 5ನೇ ತರಗತಿವರೆಗೆ ಬೆಳವಾಡಿಯ ಸರ್ಕಾರಿ ಶಾಲೆ, 6ರಿಂದ 12ರವರೆಗೆ ಚಾಮರಾಜನಗರದ ಹೊಂಡರಬಾಳಿನ ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ. ಮಂಡ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಎಂಬಿಬಿಎಸ್‌ ಹಾಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂ.ಡಿ ಪಿಡಿಯಾಟ್ರಿಕ್ಸ್‌ ಪದವಿ.

ಅಭಿಪ್ರಾಯ: 2022ರಲ್ಲಿ 448ನೇ ರ‍್ಯಾಂಕ್‌ ಮೂಲಕ ಕರ್ನಾಟಕ ಕೇಡರ್‌ನಲ್ಲಿ ಐಪಿಎಸ್‌ ಹುದ್ದೆ ಪಡೆದೆ. ಹೈದರಾಬಾದ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಇದೇ ಅ.10ಕ್ಕೆ ಮುಗಿಯಲಿದೆ. ಐಎಎಸ್‌ ಹುದ್ದೆಗಾಗಿ ಪರೀಕ್ಷೆ ಬರೆಯುತ್ತಿದ್ದೇನೆ. 2023ರ ಪರೀಕ್ಷೆಯಲ್ಲಿ 600ನೇ ರ‍್ಯಾಂಕ್‌ ಬಂದಿತ್ತು. ಈ ಬಾರಿ 523ನೇ ರ‍್ಯಾಂಕ್‌ ಬಂದಿದೆ. 2019ರಲ್ಲಿ ಮದುವೆಯಾದೆ, 2020ರಲ್ಲಿ ಮಗ ಅಥರ್ವ ಹುಟ್ಟಿದ. ಜವಾಬ್ದಾರಿಗಳ ಜೊತೆಗೆ ಪರೀಕ್ಷೆ ಪಾಸು ಮಾಡಿದ್ದೆ. ಪತ್ನಿ ಡಾ.ಚೈತ್ರಾ ಸಹಕಾರ ನೀಡಿದ್ದರು. ಐಪಿಎಸ್‌ ತರಬೇತಿ ಜೊತೆಗೇ ತಯಾರಿ ನಡೆಸಿದ್ದೆ. ಮೂರನೇ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದ ಖುಷಿಯಿದೆ. ಐಎಎಸ್‌ ಆಗುವ ಕನಸು ಈಡೇರಲಿಲ್ಲ. ಆದರೆ, ಎಲ್ಲ ಪ್ರಯತ್ನ ಮಾಡಿರುವ ತೃಪ್ತಿಯಿದೆ. ಹುಟ್ಟಿದ ನಾಡಿನಲ್ಲಿಯೇ ಸೇವೆ ಸಲ್ಲಿಸುವ ಅವಕಾಶವೂ ಸಿಕ್ಕಿದೆ

ಜೆ.ಭಾನುಪ್ರಕಾಶ್‌ 

ಐದನೇ ಪ್ರಯತ್ನದಲ್ಲಿ ಉತ್ತೀರ್ಣ

ಹೆಸರು: ಪಾಂಡುರಂಗ ಕಂಬಳಿ

ಊರು: ಅಕ್ಕಿಮರಡಿ ಗ್ರಾಮ, ಮುಧೋಳ ತಾಲ್ಲೂಕು, ಬಾಗಲಕೋಟೆ

ಹಿನ್ನೆಲೆ: ತಂದೆ ಸದಾಶಿವ ಮತ್ತು ತಾಯಿ ಸುರೇಖಾ ಕಂಬಳಿ ಕೃಷಿಕರು. ಶಾಲಾ ಶಿಕ್ಷಣವನ್ನು ಸೈದಾಪುರದ ಶಿವಲಿಂಗೇಶ್ವರ ಶಾಲೆಯಲ್ಲಿ ಕುಳಗೇರಿಯ ನವೋದಯ ಶಾಲೆಯಲ್ಲಿ ‍ಪೂರ್ಣಗೊಳಿಸಿದರು. ಯಲ್ಲಟ್ಟಿಯ ಕೊಣ್ಣೂರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಸಾಫ್ಟವೇರ್ ಎಂಜಿನಿಯರ್ ಆಗಿ ಎರಡು ವರ್ಷ ನೌಕರಿ ಮಾಡಿ, ನಂತರ ಉದ್ಯೋಗ ತೊರೆದರು. 2023ರ ನವೆಂಬರ್ ನಲ್ಲಿನ ಯುಪಿಎಸ್‍ಸಿ (ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ 42ನೇ ರ‍್ಯಾಂಕ್ ಪಡೆದರು.

ಅಭಿಪ್ರಾಯ: ‘ನಾಲ್ಕನೇ ಪ್ರಯತ್ನದಲ್ಲಿ ಐಎಫ್‍ಎಸ್ ಸಿಕ್ಕಿತ್ತು. ನೌಕರಿಗೆ ಸೇರ್ಪಡೆಯಾಗಿ ರಜೆ ತೆಗೆದುಕೊಂಡು ಮತ್ತೆ ಓದಲು ಆರಂಭಿಸಿದ್ದೆ. ಐದನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದು ಖುಷಿ ತಂದಿದೆ. ನಿರಂತರ ಅಧ್ಯಯನ ಕೈಗೊಂಡರೆ ಯಶಸ್ಸು ಸಾಧಿಸಬಹುದು.’

ಪಾಂಡುರಂಗ ಕಂಬಳಿ

ಪಾಠ ಮಾಡುತ್ತಲೇ ಪಾಸ್

ಹೆಸರು: ಮೋಹನ್ ಎಸ್‌.ಪಾಟೀಲ

ಊರು: ಡೋರ ಜಂಬಗಾ (ಕಲಬುರಗಿ ಜಿಲ್ಲೆ, ಕಮಲಾಪುರ ತಾಲ್ಲೂಕು)

ಹಿನ್ನೆಲೆ: ಗುತ್ತಿಗೆದಾರ ಸಂಗಣಗೌಡ ಪಾಟೀಲ ಮತ್ತು ಸವಿತಾ ದಂಪತಿಯ ಮಗ ಮೋಹನ್. ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನ ಆರ್‌.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದರು. ಬೆಂಗಳೂರಿನ ಕ್ರಿಯೇಟಿವ್ ಐಎಎಸ್‌ ಸೆಂಟರ್‌ನಲ್ಲಿ ಅಭ್ಯರ್ಥಿಗಳಿಗೆ ಬೋಧಿಸುತ್ತಲೇ ಯುಪಿಎಸ್‌ಸಿಗೆ ಸಿದ್ಧತೆ ಮಾಡಿಕೊಂಡು, 5ನೇ ಪ್ರಯತ್ನದಲ್ಲಿ ಯಶಸ್ವಿಯಾದರು.

ಅಭಿಪ್ರಾಯ: ಯುಪಿಎಸ್‌ಸಿ ಪಾಸ್ ಮಾಡುವುದು ನಮ್ಮ ಭಾಗದವರಿಂದ ಆಗುವುದಿಲ್ಲ ಎಂಬ ಮನಸ್ಥಿತಿ ಬಹಳಷ್ಟು ಜನರಲ್ಲಿದೆ. ಶಾಲಾ ಹಂತದಿಂದಲೇ ಓದುವ ಅಭಿರುಚಿಯನ್ನು ಬೆಳೆಸಿಕೊಂಡರೆ ಕಲಬುರಗಿಯವರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಬಲ್ಲರು ಎಂಬುದನ್ನು ನಿರೂಪಿಸಿದ ಖುಷಿ ಇದೆ.

ಮೋಹನ್ ಎಸ್‌.ಪಾಟೀಲ

ಕೋಚಿಂಗ್ ಪಡೆಯದೆ ಪಾಸ್

ಹೆಸರು: ಎ.ಸಿ.ಪ್ರೀತಿ

ವಿದ್ಯಾರ್ಹತೆ: ಎಂ.ಎಸ್ಸಿ

ಊರು: ಅಂಕನಹಳ್ಳಿ, ಮೈಸೂರು

ಹಿನ್ನೆಲೆ: ಸಾಲಿಗ್ರಾಮ ತಾಲ್ಲೂಕಿನ ಮಾಯಿಗೌಡನಹಳ್ಳಿ– ಅಂಕನಹಳ್ಳಿಯ ಕೃಷಿಕರಾದ ಚನ್ನಬಸಪ್ಪ, ನೇತ್ರಾವತಿ ದಂಪತಿ ಪುತ್ರಿ. 10ನೇ ತರಗತಿವರೆಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದರು. ನಂತರ, ಕೆ.ಆರ್.ನಗರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರ್ಪಡೆ. ಮಂಡ್ಯ‌ದ ವಿಸಿ ಫಾರಂನಲ್ಲಿ ಕೃಷಿ ಬಿಎಸ್‌ಸಿ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ‍ಪದವಿ.

ಅಭಿಪ್ರಾಯ: ‘ನಮ್ಮದು ಬಡ ಕೃಷಿಕ ಕುಟುಂಬ. ತಂದೆ ಕೃಷಿಕರು ಹಾಗೂ ಬಿಡುವಿನಲ್ಲಿ ಅಡುಗೆಭಟ್ಟರ ಕೆಲಸ ಮಾಡುತ್ತಿದ್ದರು. ಪೋಷಕರ ಬೆಂಬಲ ಹಾಗೂ ಪ್ರೋತ್ಸಾಹವೇ ಇಲ್ಲಿಯವರೆಗೂ ಕರೆತಂದಿದೆ. 3ನೇ ಪ್ರಯತ್ನದಲ್ಲಿ ಉತ್ತೀರ್ಣಳಾಗಿದ್ದೇನೆ. ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದೆ. ಹಣ ವ್ಯರ್ಥ ಮಾಡಬಾರದೆಂದು ನಿರ್ಧರಿಸಿ, ಎಲ್ಲಿಯೂ ಕೋಚಿಂಗ್ ಪಡೆಯಲಿಲ್ಲ. ಹೈದರಾಬಾದ್‌ನಲ್ಲಿ ಪಿಜಿಯಲ್ಲಿ ಉಳಿದು, ಅಲ್ಲಿನ ಗ್ರಂಥಾಲಯಗಳಲ್ಲಿ ಓದುತ್ತಿದ್ದೆ. ಈಗಾಗಲೇ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಸಲಹೆಯನ್ನೂ ಪಡೆದಿದ್ದೆ.’

ಎ.ಸಿ.ಪ್ರೀತಿ

ಎಂಟನೇ ಪ್ರಯತ್ನದಲ್ಲಿ ಪಾಸಾಗಿದ್ದೇನೆ

ಹೆಸರು: ಅಜಯಕುಮಾರ್

ವಿದ್ಯಾರ್ಹತೆ: ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿ (ಸಾರ್ವಜನಿಕ ಆಡಳಿತ ಮತ್ತು ಸಂಸ್ಕೃತ)

ಊರು: ರಾಮನಗರ 

ಹಾಲಿ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ

ಕೌಟುಂಬಿಕ ಹಿನ್ನೆಲೆ: ತಂದೆ ಆದಿಶೇಷ ಬಿ. ಅವರು ಆದಿಚುಂಚನಗಿರಿಯ ಕಾಲಭೈರವೇಶ್ವರ ವೇದ ಆಗಮ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅಧೀಕ್ಷಕರಾಗಿ ನಿವೃತ್ತಿ. ತಾಯಿ ನಾಗರತ್ನ ಗೃಹಿಣಿ. ಇಬ್ಬರು ಸಹೋದರಿಯರಿದ್ದು, ಒಬ್ಬರು ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಭಿಪ್ರಾಯ: ‘ಯುಪಿಎಸ್‌ಸಿ ಪರೀಕ್ಷೆಯನ್ನು ಎಂಟು ಸಲ ಎದುರಿಸಿ, 8ನೇ ಪ್ರಯತ್ನದಲ್ಲಿ ಪಾಸಾಗಿದ್ದೇನೆ. ನನ್ನ ಈ ಸಾಧನೆಗೆ ನನ್ನ ತಂದೆ ಹಾಗೂ ಉಪ ತಹಶೀಲ್ದಾರರಾಗಿ ನಿವೃತ್ತರಾಗಿದ್ದ ತಾತ ಜಿ. ಬೋರಯ್ಯ ಅವರೇ ಸ್ಫೂರ್ತಿ. ಕಾಲೇಜು ಶಿಕ್ಷಣ ಮುಗಿದ ಬಳಿಕ ದೆಹಲಿಯ ವಾಜಿರಾಂ, ದಿಗ್ಮನಿ, ಪವನ್ ಕುಮಾರ್ ಐಎಎಸ್ ಕೋಚಿಂಗ್ ಸೆಂಟರ್ ಹಾಗೂ ಕರ್ನಾಟಕದ ಅಕ್ಕಾ ಐಎಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದೆ. ಜೊತೆಗೆ ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ ಪಿ. ಮಣಿವಣ್ಣನ್ ಅವರ ಮಾರ್ಗದರ್ಶನ ನನಗೆ ತುಂಬಾ ಉಪಯುಕ್ತವಾಯಿತು.’

ಅಜಯಕುಮಾರ್

ಮೊದಲ ಪ್ರಯತ್ನದಲ್ಲೇ ಯಶಸ್ಸು!

ಹೆಸರು: ವಿ. ವಿಕಾಸ್

ಊರು: ಸಾಗರ (ಶಿವಮೊಗ್ಗ ಜಿಲ್ಲೆ)

ಹಿನ್ನೆಲೆ: ಸಾಗರದ ಕಾಗೋಡು ತಿಮ್ಮಪ್ಪ ನಗರದ ಅಣಲೆಕೊಪ್ಪ ಬಡಾವಣೆ ನಿವಾಸಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಜಯೇಂದ್ರ ಸಿ.ಪಾಟೀಲ ಹಾಗೂ ಶಿಕ್ಷಕಿ ಮಹಾಲಕ್ಷ್ಮಿ ಹೆಗಡೆ ದಂಪತಿ ಪುತ್ರ. ಐಐಟಿ ರೂರ್ಕಿಯಲ್ಲಿ (ಇ ಆ್ಯಂಡ್ ಇ) ಎಂ.ಟೆಕ್ ಪದವಿ. 27 ವರ್ಷದ ವಿಕಾಸ್‌ಗೆ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು.

ಅಭಿಪ್ರಾಯ: ಮಗನಿಗೆ ಮೊದಲ ತರಗತಿಯಿಂದ ಪದವಿವರೆಗೆ ಕಲಿಸಿದ ಎಲ್ಲ ಗುರುಗಳ ಆಶೀರ್ವಾದ ಹಾಗೂ ಏನಾದರೂ ಮಹತ್ವವಾದದ್ದನ್ನು ಸಾಧಿಸಬೇಕು ಎಂಬ ಆತನ ಛಲ ಈ ಸಾಧನೆಗೆ ಪ್ರೇರಣೆಯಾಗಿದೆ ಎನ್ನುತ್ತಾರೆ ವಿಕಾಸ್‌ ತಂದೆ ವಿಜಯೇಂದ್ರ ಸಿ.ಪಾಟೀಲ.

ವಿ. ವಿಕಾಸ್

ಐಪಿಎಸ್ ಹುದ್ದೆ ದೊರೆಯುವ ನಿರೀಕ್ಷೆ ಇದೆ

ಹೆಸರು: ರಾಹುಲ್ ಯರಂತೇಲಿ

ಊರು: ಮುದ್ದೇಬಿಹಾಳ, ವಿಜಯಪುರ ಜಿಲ್ಲೆ

ಶಿಕ್ಷಣ: ಬಿಇ ಕಂಪ್ಯೂಟರ್ ಸೈನ್ಸ್‌

ಹಿನ್ನೆಲೆ: ತಂದೆ, ಶಿಕ್ಷಕ ಚೆನ್ನಪ್ಪ ಯರಂತೇಲಿ ಮತ್ತು ತಾಯಿ ಸುಮಿತ್ರಾ ಗೃಹಿಣಿ. ರಾಹುಲ್‌ ಅವರು ಇಣಚಗಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಆಲಮಟ್ಟಿ ಜವಾಹರ ನವೋದಯವಿದ್ಯಾಲಯದಲ್ಲಿ  6-12ನೇ ತರಗತಿ ಓದಿದ್ದಾರೆ. ಬೆಂಗಳೂರಿನ ಎಂಯುಜೆ ಕಾಲೇಜಿನಲ್ಲಿ ಓದಿದ್ದಾರೆ.

ಅಭಿಪ್ರಾಯ: ‘ಇದು ನನ್ನ ಆರನೇ ಪ್ರಯತ್ನವಾಗಿತ್ತು. ಮೂರು ಬಾರಿ ಮುಖ್ಯಪರೀಕ್ಷೆ ಬರೆದಿದ್ದೆ. ಆದರೆ, ವಿಫಲನಾಗಿದ್ದೆ. ನಾಲ್ಕನೇ ಬಾರಿ ಮುಖ್ಯಪರೀಕ್ಷೆ ಉತ್ತೀರ್ಣನಾಗಿ ಸಂದರ್ಶನ ಮುಗಿಸಿದ್ದು, 462ನೇ ರ‍್ಯಾಂಕ್ ಬಂದಿದೆ. ಹುದ್ದೆಯ ಬಗ್ಗೆ ಇರುವ ಆಸಕ್ತಿ, ಗೌರವದಿಂದ ಸಾರ್ವಜನಿಕ ಸೇವೆ ಮಾಡಲು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಐಪಿಎಸ್ ಹುದ್ದೆ ದೊರೆಯುವ ನಿರೀಕ್ಷೆ ಇದೆ.’

ರಾಹುಲ್ ಯರಂತೇಲಿ

ಡಿ.ಸಿ ಆಗಬೇಕು, ಮತ್ತೆ ಪರೀಕ್ಷೆ ಬರೆಯುವೆ

ಹೆಸರು: ಹನುಮಂತಪ್ಪ ನಂದಿ

ಊರು: ಕೊಡ್ಲಿವಾಡ, ಯರಗಟ್ಟಿ ತಾಲ್ಲೂಕು, ಬೆಳಗಾವಿ ಜಿಲ್ಲೆ

ಹಿನ್ನೆಲೆ: ಕೃಷಿ ಕುಟುಂಬ. 2 ಎಕರೆ ಹೊಲವಿದೆ.ಕಿರಿಯ ಸಹೋದರ ಆನಂದ ಅವರು ಕುರಿ ಕಾಯುತ್ತ ಹನುಮಂತ ಅವರ ಓದಿಗೆ ನೆರವಾಗಿದ್ದಾರೆ. ಶಾಲಾ ಶಿಕ್ಷಣವನ್ನು ಕೊಡ್ಲಿವಾಡದ ಸರ್ಕಾರಿ ಶಾಲೆಯಲ್ಲಿ ಸತ್ತಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ‍ಪೂರ್ಣಗೊಳಿಸಿದರು. ಧಾರವಾಡದ ಕೆಸಿಡಿಯಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯು ರ್‍ಯಾಂಕ್‌ ಸಮೇತ ಪಾಸಾದರು. ಬೆಳಗಾವಿಯ ಜಿಐಟಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ, ಯುಪಿಎಸ್‌ಸಿಗೆ ಸಿದ್ಧತೆ ನಡೆಸಿದರು.

ಅಭಿಪ್ರಾಯ: ‘ನನಗೆ 500ನೇ ರ‍್ಯಾಂಕ್ ಒಳಗೆ ಬರಬೇಕು ಎಂಬ ಆಸೆ ಇದೆ. ಸದ್ಯ 8ನೇ ಪ್ರಯತ್ನದಲ್ಲಿ 910ನೇ ರ್‍ಯಾಂಕ್‌ ಪಡೆದಿದ್ದೇನೆ. ರೈಲ್ವೆಯಲ್ಲಿ ಉದ್ಯೋಗ ಸಿಗಬಹುದು. ಆದರೆ, ನನ್ನ ಗುರಿ ಜಿಲ್ಲಾಧಿಕಾರಿ ಆಗುವುದು. ಅದಕ್ಕಾಗಿ ಇನ್ನಷ್ಟು ಶ್ರಮ ಪಡುತ್ತೇನೆ. ಮತ್ತೆ ಪರೀಕ್ಷೆ ಬರೆಯುತ್ತೇನೆ.’

ಹನುಮಂತಪ್ಪ ನಂದಿ

ಮತ್ತೊಂದು ಪ್ರಯತ್ನ ಮಾಡುತ್ತೇನೆ

ಹೆಸರು: ಎ.ಮಧು

ವಿದ್ಯಾರ್ಹತೆ: ಬಿ.ಎಸ್ಸಿ (ಕೃಷಿ)

ಊರು: ಇರಗಸಂದ್ರ, ಕೋಲಾರ ತಾಲ್ಲೂಕು

ಹಾಲಿ ಹುದ್ದೆ: ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ

ಹಿನ್ನೆಲೆ: ತಂದೆ ಆನಂದ್‌ ಗೌಡ ಹಾಗೂ ತಾಯಿ ಸುಶೀಲಮ್ಮ ಕೃಷಿಕರು. ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ.

ಅಭಿಪ್ರಾಯ: ‘ಪಿಯುಸಿ ಬಳಿಕ ವೈದ್ಯಕೀಯ ಕೋರ್ಸ್‌ ಮಾಡಬೇಕೆಂದುಕೊಂಡಿದ್ದೆ. ಆದರೆ, ಸೀಟು ಸಿಗಲಿಲ್ಲ. ಆಗಲೇ ಯುಪಿಎಸ್‌ಸಿಯಲ್ಲಿ ಉತ್ತೀರ್ಣನಾಗಿ ಐಎಎಸ್‌ ಅಧಿಕಾರಿ ಆಗಬೇಕೆಂಬ ಛಲ ಮೂಡಿತು. ಆದರೆ, ಸತತ ನಾಲ್ಕು ಪ್ರಯತ್ನ ಹಾಕಿದರೂ ಉತ್ತೀರ್ಣನಾಗಲು ಸಾಧ್ಯವಾಗಿಲಿಲ್ಲ. ಐದನೇ ಯತ್ನದಲ್ಲಿ ಉತ್ತೀರ್ಣನಾಗಿದ್ದೇನೆ. ರ‍್ಯಾಂಕ್ ಬಂದಿರುವುದು ಸಂತೋಷ ಉಂಟು ಮಾಡಿದ್ದರೂ ಮತ್ತೊಂದು ಪ್ರಯತ್ನ ಮಾಡುತ್ತೇನೆ.’

ಎ.ಮಧು

ಡಿ.ಕೆ.ರವಿ ಸಾಧನೆ ನನಗೆ ಸ್ಫೂರ್ತಿ

ಹೆಸರು: ಡಾ.ಆರ್‌.ಮಾಧವಿ ವಿದ್ಯಾರ್ಹತೆ: ಎಂಬಿಬಿಎಸ್‌

ಊರು: ಶ್ರೀನಿವಾಸಪುರ, ಕೋಲಾರ

ಹಾಲಿ ಹುದ್ದೆ: ಆನೇಕಲ್‌ನಲ್ಲಿರುವ ಎನ್‌ಜಿಒನಲ್ಲಿ ವೈದ್ಯಕೀಯ ಅಧಿಕಾರಿ

ಹಿನ್ನೆಲೆ: ತಂದೆ ರವಿಕುಮಾರ್‌ ಮೋತಕಪಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕ‌ ಹಾಗೂ ತಾಯಿ ನಂದಿನಿ ಅವರು ಜೋಡಿಲಕ್ಷ್ಮಿಸಾಗರದಲ್ಲಿ ಶಾಲಾ ಶಿಕ್ಷಕಿ. ಮಾಧವಿ ಅವರ ತಂಗಿ ಆರ್‌.ಶ್ರೀನಿಧಿ ಕೂಡ ವೈದ್ಯೆ.

ಅಭಿಪ್ರಾಯ: ‘ಫಲಿತಾಂಶ ಸಹಜವಾಗಿಯೇ ಖುಷಿ ತಂದಿದೆ. ನಾಲ್ಕನೇ ಪ್ರಯತ್ನದಲ್ಲಿ ನನಗೆ ಯಶಸ್ಸು ಸಿಕ್ಕಿದೆ. ಚಿಕ್ಕ ವಯಸ್ಸಿನಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಆಸಕ್ತಿ ಮೂಡಿತ್ತು. ಪೋಷಕರು ಹಾಗೂ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ನನಗೆ ಸ್ಫೂರ್ತಿ. ಐಎಎಸ್‌ ಅಧಿಕಾರಿ ಆಗಬೇಕೆಂದುಕೊಂಡಿದ್ದು, ಆ ನಿಟ್ಟಿನಲ್ಲಿ ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ಬರೆದು ರ‍್ಯಾಂಕ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇನೆ.’

ಡಾ.ಆರ್‌.ಮಾಧವಿ ವಿದ್ಯಾರ್ಹತೆ: ಎಂಬಿಬಿಎಸ್‌

ಯಶಸ್ಸು ತಂದ ‘ಪ್ರಜಾವಾಣಿ’ ಓದು

ಹೆಸರು: ಡಾ.ಮಹೇಶ ಮಡಿವಾಳರ

ಊರು: ಹೊನ್ನಳ್ಳಿ ಗ್ರಾಮ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ

ಹಿನ್ನೆಲೆ: ತಂದೆ ರೇವಣಸಿದ್ಧ ಮಡಿವಾಳರ ಕೃಷಿಕರು. ತಾಯಿ ಯಮುನಾಬಾಯಿ ಗೃಹಿಣಿ. ಶಾಲಾ ಶಿಕ್ಷಣವನ್ನು ಹೊನ್ನಳ್ಳಿ ಮತ್ತು ಹೊರ್ತಿಯಲ್ಲಿ ಪೂರ್ಣಗೊಳಿಸಿದರು. ಪಿಯು ಶಿಕ್ಷಣ ವಿಜಯಪುರದ ಎಂ.ಡಿ.ಆರ್.ಎಸ್ ಕಾಲೇಜಿನಲ್ಲಿ, ವೈದ್ಯಕೀಯ ಶಿಕ್ಷಣ ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಸದ್ಯಕ್ಕೆ ಮುದ್ದೇಬಿಹಾಳ ತಾಲ್ಲೂಕು ಮಡಿಕೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಆಗಿದ್ದಾರೆ.

ಅಭಿಪ್ರಾಯ: ‘ನನಗೆ ಮೊದಲಿನಿಂದಲೂ ‘ಪ್ರಜಾವಾಣಿ’ ಅಚ್ಚುಮೆಚ್ಚು. ಅದರಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಮಾಹಿತಿ ತಪ್ಪದೇ ಓದುತ್ತಿದ್ದೆ. ಫಲಿತಾಂಶ ಖುಷಿ ತಂದಿದೆ. ಒಬಿಸಿ ಕೆಟಗರಿಯಲ್ಲಿ ಬರುವ ಕಾರಣ ನನಗೆ ಐಪಿಎಸ್ ಹುದ್ದೆ ಸಿಗುವವಿಶ್ವಾಸ ಇದೆ. ಐಪಿಎಸ್ ಆದರೂ ಅಲ್ಲಿಯೂ
ಮತ್ತಷ್ಟು ಅಧ್ಯಯನ ಮಾಡಿ ಐಎಎಸ್ ಮಾಡಿ ಸಾರ್ವಜನಿಕ ಸೇವೆಗೆ ತೊಡಗಿಕೊಳ್ಳಬೇಕು ಎಂಬುದು ನನ್ನ ಗುರಿ.

ಡಾ.ಮಹೇಶ ಮಡಿವಾಳರ

ಕನ್ನಡ ಐಚ್ಛಿಕ ವಿಷಯದಲ್ಲಿ ಯಶಸ್ಸು

ಹೆಸರು: ಡಾ.ಎಲ್‌.ದಯಾನಂದ ಸಾಗರ್

ಊರು: ಮಾದೇನಹಳ್ಳಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ

ಹಿನ್ನೆಲೆ: 5ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ದಯಾನಂದ ಸಾಗರ್‌ ಅವರಿಗೆ ಕನ್ನಡ ಭಾಷೆಯ ಮೇಲೆ ಅತೀವ ವ್ಯಾಮೋಹ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್‌ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ 2 ವರ್ಷ ಸೇವೆ ಸಲ್ಲಿಸಿದ ಇವರು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಯುಪಿಎಸ್‌ಸಿ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಯಶಸ್ಸು ಪಡೆದಿದ್ದಾರೆ.

ಅಭಿಪ್ರಾಯ: ‘ನಿವಾಸಿ ವೈದ್ಯರ ಸಂಘದ ರಾಜ್ಯ ಘಟಕದ ಅಧ್ಯಕ್ಷನಾಗಿದ್ದ ಸಂದರ್ಭ ಉಂಟಾದ ಅನುಭವಗಳು ನಾಗರಿಕ ಸೇವೆಯತ್ತ ಆಸಕ್ತಿ ಮೂಡಿಸಿತು. 2023ರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದೆ. ಕೋಚಿಂಗ್ಗೆ ಹೋಗದೇ ಸ್ವಯಂ ಅಭ್ಯಾಸ ಮಾಡಿದ್ದೇನೆ. ಮುಖ್ಯ ಪರೀಕ್ಷೆಗೆ 2 ತಿಂಗಳು ರಜೆ ಪಡೆದಿದ್ದೆ. ಕನ್ನಡ ಭಾಷೆಯ ಮೇಲಿನ ಪ್ರೀತಿ ಯುಪಿಎಸ್‌ಸಿ ಪರೀಕ್ಷೆಯ ಗುರಿ ಮುಟ್ಟಿಸಿದೆ.’

ಡಾ.ಎಲ್‌.ದಯಾನಂದ ಸಾಗರ್

ನಿತ್ಯ ಶಿಸ್ತುಬದ್ಧ ಅಧ್ಯಯನ

ಹೆಸರು: ಧನ್ಯಾ ಕೆ.ಎಸ್.

ಊರು: ಸಕಲೇಶಪುರ

ಹಿನ್ನೆಲೆ: ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಿಂದ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್ ಪದವಿ. ತಂದೆ ಟಿ. ಸುಬ್ರಹ್ಮಣ್ಯ ಸಾಂಬಾರು ಮಂಡಳಿಯ ನಿವೃತ್ತ ಸಹಾಯಕ ನಿರ್ದೇಶಕ, ತಾಯಿ ವಿಜಯಕುಮಾರಿ ಕೋರ್ಟ್‌ನಲ್ಲಿ ಶಿರಸ್ತೇದಾರರು.

ಅಭಿಪ್ರಾಯ: ಮೊದಲ ಎರಡು ಪ್ರಯತ್ನದಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಲಿಲ್ಲ. ನಿತ್ಯ ಶಿಸ್ತುಬದ್ಧ ಅಧ್ಯಯನ, ಪತ್ರಿಕೆ, ಗ್ರಂಥಾಲಯದ ಪುಸ್ತಕಗಳನ್ನು ಓದುವ ಮೂಲಕ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ.

ಧನ್ಯಾ ಕೆ.ಎಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.