ADVERTISEMENT

ಕುಡಿಯುವ ನೀರಲ್ಲಿ ಯುರೇನಿಯಂ: ಬದಲಿ ವ್ಯವಸ್ಥೆಗೆ ಜಲ ಶಕ್ತಿ ಸಚಿವ ಶೇಖಾವತ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 23:15 IST
Last Updated 5 ಮಾರ್ಚ್ 2022, 23:15 IST
   

ಬೆಂಗಳೂರು: ರಾಜ್ಯದ ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನಲ್ಲಿ ಯುರೇನಿಯಂ ಮಿಶ್ರಣ ಪತ್ತೆಯಾಗಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ತಕ್ಷಣ ಬದಲಿ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ.

ಜಲ ಜೀವನ್‌ ಮಿಷನ್‌ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಯೋಜನೆಗಳ ಅನುಷ್ಠಾನ ಕುರಿತು ವಿಧಾನಸೌಧದಲ್ಲಿ ಶನಿವಾರ ನಡೆದ ದಕ್ಷಿಣದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಕರ್ನಾಟಕದ ಪೂರ್ವಭಾಗದ ಕೆಲವು ಹಳ್ಳಿಗಳಲ್ಲಿ ಯುರೇನಿಯಂ ಮಿಶ್ರಣದಿಂದ ಕಲುಷಿತಗೊಂಡಿರುವ ನೀರನ್ನು ಕುಡಿಯುವುದಕ್ಕೆ ಪೂರೈಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಅತ್ಯಂತ ಗಂಭೀರವಾದ ವಿಚಾರ. ಯುರೇನಿಯಂ ಮಿಶ್ರಿತ ನೀರನ್ನು ಕುಡಿಯುವಂತೆ ಜನರ ಮೇಲೆ ಒತ್ತಡ ಹೇರಬಾರದು. ತಕ್ಷಣ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೇನೆ’ ಎಂದು ಕೇಂದ್ರ ಸಚಿವರು ಹೇಳಿದರು.

ADVERTISEMENT

ರಾಜ್ಯದ ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಪೂರೈಸುತ್ತಿರುವ ಕುಡಿಯುವ ನೀರಿನಲ್ಲಿ ಯುರೇನಿಯಂ ಮಿಶ್ರಣ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ಈ ಸಮಸ್ಯೆ ಕಂಡುಬಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಒದಗಿಸಬೇಕು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಆಗ ಶುದ್ಧ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ’ ಎಂದು ಶೇಖಾವತ್‌ ತಿಳಿಸಿದರು.

ಮೇಕೆದಾಟು ವಿವಾದ ಇತ್ಯರ್ಥಕ್ಕೆ ಮಾತುಕತೆ

ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮಾತುಕತೆಯ ಮೂಲಕವೇ ವಿವಾದ ಪರಿಹರಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ಎರಡೂ ಕಡೆಯವರು ಕುಳಿತು ಚರ್ಚಿಸಿ, ಒಮ್ಮತಕ್ಕೆ ಬರಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.