ADVERTISEMENT

ಅಡಿಕೆ ಹಾಳೆಯ ಉತ್ಪನ್ನಗಳಿಗೆ US ನಿಷೇಧ:ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪತ್ರ

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:18 IST
Last Updated 27 ಮೇ 2025, 16:18 IST
ಅಡಿಕೆ ಹಾಳೆಯಿಂದ ತಯಾರಿಸಿದ ಪ್ಲೇಟ್‌ಗಳು
ಅಡಿಕೆ ಹಾಳೆಯಿಂದ ತಯಾರಿಸಿದ ಪ್ಲೇಟ್‌ಗಳು   

ಬೆಂಗಳೂರು: ‘ಅಡಿಕೆ ಹಾಳೆಗಳಿಂದ ತಯಾರಿಸಿದ ತಟ್ಟೆ, ಬಟ್ಟಲು, ಲೋಟಗಳ ಬಳಕೆಯನ್ನು ಅಮೆರಿಕ ನಿಷೇಧಿಸಿರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ, ಪರಿಹಾರ ಒದಗಿಸಬೇಕು’ ಎಂದು ಕರ್ನಾಟಕದ ಕೃಷಿ ತಜ್ಞರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೃಷಿ ಬೆಲೆ ಆಯೋಗದ ಹಿಂದಿನ ಅಧ್ಯಕ್ಷ ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಅವರು ಬರೆದಿರುವ ಈ ಪತ್ರಕ್ಕೆ ಕರ್ನಾಟಕ ಮತ್ತು ದೇಶದ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ 106 ಕೃಷಿ ವಿಜ್ಞಾನಿಗಳು ಸಹಿ ಮಾಡಿದ್ದಾರೆ.

‘ಅಡಿಕೆ ಹಾಳೆಯಲ್ಲಿ ನೈಸರ್ಗಿಕವಾಗಿಯೇ ಇರುವ ವಿಷಕಾರಿ ಅಂಶದಿಂದ ಕ್ಯಾನ್ಸರ್‌ ಬರುತ್ತದೆ. ಅವುಗಳನ್ನು ಬಳಸಬೇಡಿ ಎಂದು ಅಮೆರಿಕದ ಆಹಾರ ಮತ್ತು ಔಷಧ ವ್ಯವಹಾರಗಳ ಸಚಿವಾಲಯವು ಸುತ್ತೋಲೆ ಹೊರಡಿಸಿದೆ. ಪರಿಣಾಮವಾಗಿ ಅಮೆರಿಕದಲ್ಲಿ ಅಡಿಕೆ ಹಾಳೆಗಳಿಂದ ತಯಾರಿಸಿದ ವಸ್ತುಗಳಿಗೆ ಬೇಡಿಕೆ ಕುಸಿಯಲಿದೆ’ ಎಂದು ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಅಮೆರಿಕವು ಪ್ರತಿ ವರ್ಷ ₹3,500 ಕೋಟಿ ಮೊತ್ತದಷ್ಟು ಅಡಿಕೆ ಹಾಳೆಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಿಂದಲೇ ಸುಮಾರು ₹2,500 ಕೋಟಿ ಮೊತ್ತದಷ್ಟು ಸರಕು ರಫ್ತಾಗುತ್ತಿದ್ದು, ಬಹುಪಾಲು ಕರ್ನಾಟಕದಿಂದಲೇ ಆಗುತ್ತದೆ’ ಎಂದು ವಿವರಿಸಿದ್ದಾರೆ.

‘ಕರ್ನಾಟಕದಲ್ಲಿ ಸುಮಾರು 600 ಮಂದಿ ಅಡಿಕೆ ಹಾಳೆಯಿಂದ ತಟ್ಟೆ, ಲೋಟ, ಬಟ್ಟಲುಗಳನ್ನು ತಯಾರಿಸುವ ಘಟಕ ನಡೆಸುತ್ತಿದ್ದಾರೆ. ಸಾವಿರಾರು ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಅಮೆರಿಕವು ಹೇರಿರುವ ಈ ನಿಷೇಧದಿಂದ ರಾಜ್ಯದ ಉದ್ಯಮಿಗಳಿಗೆ, ಉದ್ಯೋಗಿಗಳಿಗೆ ಭಾರಿ ನಷ್ಟವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಅಡಿಕೆ ಹಾಳೆಯನ್ನು ಬಳಸುವುದರಿಂದ ಕ್ಯಾನ್ಸರ್‌ ಬರುತ್ತದೆ ಎಂಬುದರಲ್ಲಿ ಹುರುಳಿಲ್ಲ. ಅಮೆರಿಕದ ಈ ಏಕಪಕ್ಷೀಯ ನಿರ್ಧಾರವು ಜಾಗತಿಕ ವಾಣಿಜ್ಯ ಒಪ್ಪಂದದ ತತ್ವಗಳಿಗೆ ವಿರುದ್ಧವಾದುದು. ಈ ವಿಚಾರದಲ್ಲಿ ಪ್ರಧಾನಿ ಕೂಡಲೇ ಮಧ್ಯಪ್ರವೇಶಿಸಿ, ನಿಷೇಧವನ್ನು ತೆರವು ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಟಿ.ಎನ್‌. ಪ್ರಕಾಶ್‌ ಕಮ್ಮರಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.