ಅಂತರರಾಷ್ಟ್ರೀಯ ಶಾಸಕರ ಸಮ್ಮೇಳನ
ಬೆಂಗಳೂರು: ಅಮೆರಿಕದ ಬೋಸ್ಟನ್‌ನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಶಾಸಕರ ಸಮ್ಮೇಳನ ಅರ್ಥಪೂರ್ಣ ಚರ್ಚೆಯೊಂದಿಗೆ ಮುಕ್ತಾಯಗೊಂಡಿತು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ತಿಳಿಸಿದ್ದಾರೆ.
ಸುದ್ದಿ ಮುಖ್ಯಾಂಶಗಳು...
ಅಮೆರಿಕ ಬೋಸ್ಟನ್‌ನಲ್ಲಿ ಶಾಸಕರ ಸಮ್ಮೇಳನ ಆಯೋಜನೆ
ಜಗತ್ತಿನ ವಿವಿಧೆಡೆಯಿಂದ 5 ಸಾವಿರಕ್ಕೂ ಅಧಿಕ ಜನಪ್ರತಿನಿಧಿಗಳು ಭಾಗಿ
ಕರ್ನಾಟಕದ 23 ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗಿ
ಜನರ ಜೀವನಮಟ್ಟ, ಆರೋಗ್ಯ, ಪರಿಸರ ಸೇರಿ ಹಲವು ಗಂಭೀರ ವಿಷಯಗಳ ಬಗ್ಗೆ ಚರ್ಚೆ
ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆ ಸಮ್ಮೇಳನ ಆಯೋಜಿಸಿದ್ದು, 23 ರಾಜ್ಯಗಳ 130ಕ್ಕೂ ಹೆಚ್ಚು ಜನಪ್ರತಿನಿಧಿಗಳು, ವಿಶ್ವದ ವಿವಿಧ ದೇಶಗಳ 5 ಸಾವಿರಕ್ಕೂ ಹೆಚ್ಚು ಕಾನೂನು ತಜ್ಞರು, ವಿಷಯ ಪರಿಣಿತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಜಾಗತಿಕ ವಿದ್ಯಮಾನಗಳು ಹಾಗೂ ದೇಶ, ರಾಜ್ಯದ ಅಭಿವೃದ್ಧಿಗೆ ಅನುಕೂಲಕರ ವಿಷಯಗಳ ಬಗ್ಗೆ ಸಮಾಲೋಚನೆಗಳು ನಡೆದವು ಎಂದು ಅವರು ತಿಳಿಸಿದ್ದಾರೆ. ಮುಖ್ಯವಾಗಿ, ಯಾವುದೇ ಕಾಯ್ದೆ ಅಮೆರಿಕ ಸೆನೆಟ್‌ನಲ್ಲಿ ಮಂಡನೆಯಾಗುವುದಕ್ಕೂ ಮುನ್ನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತದೆ ಎಂಬ ಮುಖ್ಯ ವಿಚಾರ ನಮ್ಮ ಗಮನಕ್ಕೆ ಬಂತು ಎಂದರು.
ಸಮಾವೇಶದಲ್ಲಿ ಜಾಗತಿಕ ತಾಪಮಾನ, ಜನರ ಆರೋಗ್ಯ ಸುಧಾರಣೆ, ಯುವ ಶಕ್ತಿಯ ಸದ್ಬಳಕೆ, ಸೌರ ವಿದ್ಯುತ್ ಬಳಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ, ಬಿಟಿ, ನಿರುದ್ಯೋಗ ಸಮಸ್ಯೆ ನಿವಾರಣೆ, ಜನರ ಜೀವನ ಮಟ್ಟ ಸುಧಾರಣೆ ಮತ್ತು ತಲಾ ಆದಾಯ ಹೆಚ್ಚಳ ಸೇರಿದಂತೆ ಇನ್ನೂ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಿಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಶರವಣ, ಎನ್.ರವಿಕುಮಾರ್ ಸೇರಿ 23 ಶಾಸಕರು ಭಾಗವಹಿಸಿದ್ದೆವು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.