ADVERTISEMENT

ಸ್ವಾರ್ಥಕ್ಕಾಗಿ ಪ್ರಕರಣ ಬಳಕೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಮೇ 2024, 15:55 IST
Last Updated 8 ಮೇ 2024, 15:55 IST
<div class="paragraphs"><p>ಎಚ್.ಡಿ.ಕುಮಾರಸ್ವಾಮಿ</p></div>

ಎಚ್.ಡಿ.ಕುಮಾರಸ್ವಾಮಿ

   

ಬೆಂಗಳೂರು: ‘ಕಿಂಗ್‌ ಆಫ್‌ ಬ್ಲ್ಯಾಕ್‌ ಮೇಲರ್ ನಾನಲ್ಲ, ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ವ್ಯಕ್ತಿ ನೀನು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್‌ ಸಂಸ್ಕೃತಿ ಎಂಥದು ಎಂದು ಎಲ್ಲರಿಗೂ ಗೊತ್ತಿದೆ. ವಕೀಲರಾದ ದೇವರಾಜೇಗೌಡ ಜತೆ ಅವರು ಮಾತನಾಡಿದ್ದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮಹಿಳೆ ಅಪಹರಣ ಪ್ರಕರಣದಲ್ಲಿ ಏನೇನು ನಡೆದಿದೆ ಎನ್ನುವುದು ಗೊತ್ತಿದೆ. ನೊಂದ ಮಹಿಳೆ ಸಿಕ್ಕಿದ್ದು ಅವರ ಸಂಬಂಧಿಕರ ಮನೆಯಲ್ಲಿ. ಹುಣಸೂರಿನ ಪವಿತ್ರಾ ಅವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ. ರೇವಣ್ಣ ನಮ್ಮ ಪಕ್ಷದ ಶಾಸಕ, ನನ್ನ ಸಹೋದರ. ಹಾಗಾಗಿ, ಅವರ ಪರವಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತೇನೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.

‘ಪೆನ್‌ಡ್ರೈವ್‌ ಹಂಚಿಕೆಯ ಮೂಲ ಸೂತ್ರಧಾರ ಕಾರು ಚಾಲಕ ಕಾರ್ತಿಕ್‌ ಎಸ್‌ಐಟಿಗೆ ಸಿಗುತ್ತಿಲ್ಲ. ಸುದ್ದಿ ವಾಹಿನಿಗಳಿಗೆ ಸಿಗುತ್ತಾನೆ. ಅವನಿಗೆ ತರಬೇತಿ ನೀಡಲಾಗುತ್ತಿದೆ. ಬಂಡೆ ರಕ್ಷಣೆ ಕೊಡುತ್ತದೆ ಎಂದು ಕಾರ್ತಿಕ್ ಅಂದುಕೊಂಡಿದ್ದಾನೆ.  ವಿಡಿಯೊಗಳು ಬಿಡುಗಡೆ ಮಾಡಿದವರ ವಿಚಾರಣೆ ನಡೆದಿಲ್ಲ. ನವೀನ್ ಗೌಡ, ಕಾರ್ತಿಕ್ ಹಾಗೂ ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ. ತನಿಖೆಯ ದಿಕ್ಕು ಎತ್ತ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದೆ’ ಎಂದರು.

ಜೈಲಿಗೆ ಕಳಿಸಲು ಹೊಂಚು:

‘ಹಿಂದೆ ಸಿದ್ದರಾಮಯ್ಯ ಅವರು ಐಪಿಎಸ್‌ ಅಧಿಕಾರಿ ಕೆಂಪಯ್ಯ ಅವರನ್ನು ಇಟ್ಟುಕೊಂಡು ನನ್ನನ್ನು ಬಂಧಿಸಿ ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಮಾಡಿದ್ದರು. ಅವರ ಆಸೆ ಈಡೇರಲಿಲ್ಲ ’ ಎಂದು ಆರೋಪಿಸಿದರು.  

ನೊಂದ ಮಹಿಳೆಯರು ಕುಮಾರಕೃಪದಲ್ಲಿ 

‘ನೊಂದ 12 ಮಹಿಳೆಯರನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಇಟ್ಟಿದ್ದಾರೆ. ಪೆನ್‌ಡ್ರೈವ್‌ ಹಂಚುವಾಗ ಆ ಮಹಿಳೆಯರ ಮುಖ ತೋರಿಸಿ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಈಗ ನೋಡಿದರೆ ಅವರ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಟೀಕಿಸಿದರು. ‘ಮಹಿಳೆಯರ ಅಶ್ಲೀಲ ವಿಡಿಯೊಗಳಿದ್ದ ಪೆನ್‌ಡ್ರೈವ್‌ಗಳನ್ನು ಹಾದಿಬೀದಿಯಲ್ಲಿ ಸುರಿದಿರುವ ಕಿಡಿಗೇಡಿಗಳನ್ನು ರಾಜ್ಯ ಸರ್ಕಾರವೇ ರಕ್ಷಣೆ ಮಾಡುತ್ತಿದೆ. ಮುಖ್ಯಮಂತ್ರಿಗೆ ಮಾನ ಮರ್ಯಾದೆ ಗೃಹ ಸಚಿವ  ಜಿ.ಪರಮೇಶ್ವರ ಅವರಿಗೆ ಬೆನ್ನು ಮೂಳೆ ಇದೆಯಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.