ADVERTISEMENT

ತಳಮಳ ಸೃಷ್ಟಿಸಿದ ಜಿಲ್ಲಾ ಉಸ್ತುವಾರಿಗಳ ಬದಲಾವಣೆ

ವಿ. ಸೋಮಣ್ಣ, ರಮೇಶ ಜಾರಕಿಹೊಳಿಗೆ ಬೇಸರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 2:26 IST
Last Updated 11 ಏಪ್ರಿಲ್ 2020, 2:26 IST
   

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕೆಲವು ಸಚಿವರ ಬೇಸರಕ್ಕೆ ಕಾರಣವಾಗಿದೆ. ಸಂಕಷ್ಟದ ಸಂದರ್ಭದಲ್ಲಿ ತಮ್ಮ ಬೇಗುದಿ, ಅಸಮಾಧಾನ ತೋಡಿಕೊಳ್ಳದಿರುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಮೈಸೂರು ಜಿಲ್ಲೆಯ ಉಸ್ತುವಾರಿ ಹೊಂದಿದ್ದ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬದಲಿಸಿ, ಕೊಡಗು ಜಿಲ್ಲೆ ನೀಡಲಾಗಿದೆ. ದಸರಾ ಉತ್ಸವ, ಚಾಮುಂಡಿಬೆಟ್ಟದ ಸ್ವಚ್ಛತೆ ಸೇರಿ ಹಲವು ಉತ್ತಮ ಕಾರ್ಯಗಳನ್ನು ಮಾಡಿದ್ದರು. ಕೋವಿಡ್‌ ಪ್ರಕರಣ ಬೆಳಕಿಗೆ ಬಂದ ಬಳಿಕವೂ ಅವರು ಮೈಸೂರಿನಲ್ಲೇ ಬೀಡು ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಇದಕ್ಕಿದ್ದಂತೆ ಬದಲಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

67ರ ಹರೆಯದಲ್ಲೂ ನಂಜನಗೂಡಿನಲ್ಲಿ ಕೋವಿಡ್‌ ಸೋಂಕಿತ ಔಷಧದ ಫ್ಯಾಕ್ಟರಿಗೆ ಭೇಟಿ ಕೊಟ್ಟಿದ್ದರು. ಅವರ ವಯಸ್ಸಿನ ಯಾವುದೇ ಸಚಿವರಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಯಾವುದೇ ಸೂಚನೆ ನೀಡದೇ ಬದಲಿಸಿರುವುದು ಅವರಿಗೆ ಬೇಸರ ತಂದಿದೆ. ಬೇರೆಯವರ ಮಾತು ಕೇಳಿ ಈ ಬದಲಾವಣೆ ಮಾಡಿರಬಹುದು ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಬೆಳಗಾವಿ ಜಿಲ್ಲೆಯ ಉಸ್ತುವಾರಿ ಮೇಲೆ ಸಚಿವ ರಮೇಶ ಜಾರಕಿಹೊಳಿ ಕಣ್ಣಿಟ್ಟಿದ್ದರು. ಆದರೆ, ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಕೂಡಾ ಆಕಾಂಕ್ಷಿ ಆಗಿದ್ದರಿಂದ, ಜಗದೀಶ ಶೆಟ್ಟರ್‌ ಅವರನ್ನೇ ಉಸ್ತುವಾರಿ ಮಾಡಲಾಯಿತು ಎನ್ನಲಾಗಿದೆ. ರಮೇಶ ಅವರಿಗೆ ಬೇಸರವಾಗಿದ್ದರೂ ಅದನ್ನು ತೋರಿಸಿಕೊಂಡಿಲ್ಲ ಎನ್ನಲಾಗಿದೆ.

ಕೆಲವು ಸಚಿವರಿಗೆ ತವರು ಜಿಲ್ಲೆಗಳನ್ನು ನೀಡಿದ್ದರೆ. ಇನ್ನು ಕೆಲವರಿಗೆ ಬೇರೆ ಜಿಲ್ಲೆಗಳನ್ನು ನೀಡಲಾಗಿದೆ. ರಮೇಶ ಜಾರಕಿಹೊಳಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡಿಲ್ಲ. ಅದೇ ರೀತಿ ಕೆ. ಗೋಪಾಲಯ್ಯ ಮತ್ತು ಶ್ರೀಮಂತಪಾಟೀಲ ಅವರಿಗೂ ಯಾವುದೇ ಜಿಲ್ಲೆಗಳ ಉಸ್ತುವಾರಿ ನೀಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ಬೇಡ ಎಂದಿದ್ದೆ: ‘ಬೆಳಗಾವಿ ಜಿಲ್ಲೆ ಉಸ್ತುವಾರಿ ನನಗೆ ಕೊಡುವುದು ಬೇಡ. ಸದ್ಯಕ್ಕೆ ಸಚಿವ ಜಗದೀಶ ಶೆಟ್ಟರ್‌ ಅವರನ್ನೇ ಮುಂದುವರಿಸಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

‘ನನಗೆ ಅಸಮಾಧಾನ ಆಗಿದೆ ಎಂದು ರಾಜಕೀಯ ವಲಯ ಮತ್ತು ಕೆಲ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದ್ದು, ಅದರಲ್ಲಿ ಸತ್ಯಾಂಶ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಮುಖ್ಯಮಂತ್ರಿಯವರು ಬೆಳಗಾವಿ ಜಿಲ್ಲೆ ಉಸ್ತುವಾರಿಯನ್ನು ನನಗೇ ನೀಡಲು ಬಯಸಿದ್ದರು. ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ಜವಾಬ್ದಾರಿಯೂ ಹೆಚ್ಚು. ಜಲಸಂಪನ್ಮೂಲದಂತಹ ಖಾತೆ ನಿಭಾಯಿಸುವಾಗ ಜಿಲ್ಲಾ ಉಸ್ತುವಾರಿ ನಿಭಾಯಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸ್ವಂತ ಜಿಲ್ಲೆಯ ಉಸ್ತುವಾರಿ ಬೇಡ ಎಂದು ಹೇಳಿದ್ದೆ’ ಎಂದಿದ್ದಾರೆ.

ಸೋಮಶೇಖರ್‌ ಸಂತಸ: ಮೈಸೂರು ಜಿಲ್ಲೆ ಉಸ್ತುವಾರಿ ಪಡೆದಿರುವ ಎಸ್‌.ಟಿ.ಸೋಮಶೇಖರ್‌ ಅವರು ಹರ್ಷಗೊಂಡಿದ್ದಾರೆ.

‘ಯಡಿಯೂರಪ್ಪ ಅವರು ನನ್ನನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ಹೇಳಿದ್ದಾರೆ.

‘ಮೈಸೂರು ನಗರ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಜಿಲ್ಲೆಯಾಗಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಕೊರೊನಾ ಮುಕ್ತವನ್ನಾಗಿ ಮಾಡಬೇಕಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.