ADVERTISEMENT

ಕೆ.ಎನ್. ರಾಜಣ್ಣ ವಜಾ | ನಾವು ದೆಹಲಿಗೆ ಹೋಗುತ್ತೇವೆ– ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 18:50 IST
Last Updated 13 ಆಗಸ್ಟ್ 2025, 18:50 IST
<div class="paragraphs"><p>&nbsp; ಸತೀಶ ಜಾರಕಿಹೊಳಿ</p></div>

  ಸತೀಶ ಜಾರಕಿಹೊಳಿ

   

ಬೆಂಗಳೂರು: ‘ವಾಲ್ಮೀಕಿ ಸಮುದಾಯದ ಇಬ್ಬರನ್ನು ಸಂಪುಟದಿಂದ ಕೈ ಬಿಡಲಾಗಿದೆ. ವಾಲ್ಮೀಕಿ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸುವಂತೆ ಒತ್ತಾಯಿಸಲು ನಾವು ದೆಹಲಿಗೆ ಹೋಗುತ್ತೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಮುದಾಯದ ಶಾಸಕರು, ಕಾಂಗ್ರೆಸ್‌ ನಾಯಕರು ಸಭೆ ಬುಧವಾರ ನಡೆಯಿತು.

ADVERTISEMENT

ಸಭೆಯಲ್ಲಿ ಕೆ.ಎನ್. ರಾಜಣ್ಣ, ಶಾಸಕರಾದ ಟಿ. ರಘು ಮೂರ್ತಿ, ಬಸನಗೌಡ ದದ್ದಲ್, ಬಸನಗೌಡ ತುರುವೀಹಾಳ, ಅನಿಲ್‌ ಚಿಕ್ಕಮಾದು, ಬಸವಂತಪ್ಪ, ವೆಂಕಟೇಶ್, ಎಚ್‌.ಎಂ. ಗಣೇಶ ಪ್ರಸಾದ್, ಕೆ. ಹರೀಶ್​ ಗೌಡ, ರವಿಶಂಕರ್, ಮಾಜಿ ಸಚಿವ ವೆಂಕರಮಣಪ್ಪ ಮತ್ತಿತರರು ಇದ್ದರು.

ಸಭೆಯ ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ‘ಕೆ.ಎನ್. ರಾಜಣ್ಣ ಅವರಿಗೆ ಧೈರ್ಯ ಹೇಳಿದ್ದೇವೆ. ಬೇಸರ ಏನೂ ಇಲ್ಲ. ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತೇನೆಂದು ಅವರು ಹೇಳಿದ್ದಾರೆ. ದೆಹಲಿಗೆ ನಿಯೋಗ ಹೋಗುವುದು ಬೇರೆ, ಅವರು ಹೋಗುವುದು ಬೇರೆ. ನನ್ನನ್ನು ವಜಾ ಮಾಡಿರುವುದರ ಇದೆ ಷಡ್ಯಂತ್ರ ಇದೆ, ಸಮಯ ಬಂದಾಗ ಹೇಳುತ್ತೇನೆಂದು ಅವರು ಹೇಳಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ’ ಎಂದರು.

‘ಸಮುದಾಯದ ಹೋರಾಟ ಬೇರೆ, ಪಕ್ಷ ಬೇರೆ. ಷಡ್ಯಂತ್ರದ ಬಗ್ಗೆ ಅವರು ಯಾವಾಗ ಹೇಳುತ್ತಾರೆ ಎನ್ನುವುದನ್ನು ಕಾದು ನೋಡೋಣ’ ಎಂದೂ ಹೇಳಿದರು.

‘ಸಂಪುಟದಿಂದ ಕೈಬಿಟ್ಟ ಇಬ್ಬರು ನಾಯಕರೂ (ನಾಗೇಂದ್ರ ಮತ್ತು ರಾಜಣ್ಣ) ವಾಲ್ಮೀಕಿ ಸಮುದಾಯದವರೇ ಆಗಿದ್ದಾರೆ. ಆ ಮೂಲಕ ಸಮುದಾಯಕ್ಕೆ ಮೇಲಿಂದ ಮೇಲೆ ಗದಾಪ್ರಹಾರ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ವಾಲ್ಮೀಕಿ ಸಮುದಾಯದ ಪಾತ್ರವೂ ದೊಡ್ಡದಿದೆ. ಅದನ್ನು ಪರಿಗಣಿಸಿ ತೆರವಾದ ಎರಡೂ ಸಚಿವ ಸ್ಥಾನಗಳಿಗೆ ವಾಲ್ಮೀಕಿ ಸಮುದಾಯವರನ್ನೇ ನೇಮಿಸಬೇಕೆಂದು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಒತ್ತಾಯಿಸುವುದು ಒಂದು ಕಡೆಯಾದರೆ, ದೆಹಲಿಗೆ ತೆರಳಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರನ್ನೂ ಭೇಟಿ ಮಾಡಿ ಮನವೊಲಿಸಲು ನಿರ್ಧರಿಸಲಾಗಿದೆ’ ಎಂದು ಶಾಸಕರೊಬ್ಬರು ತಿಳಿಸಿದರು.

‘ಸತ್ಯವಿದ್ದರೂ ಹೇಳಬಾರದಿತ್ತು’

ಕೋಲಾರ:‘ಮತಗಳ್ಳತನ ವಿಚಾರದಲ್ಲಿ ಕೆ.ಎನ್‌.ರಾಜಣ್ಣ ಮಾತಿನಲ್ಲಿ ಸತ್ಯವಿದ್ದರೂ ಆ ರೀತಿ ಅವರು ಹೇಳಬಾರದಿತ್ತು. ನಮ್ಮ ನಾಯಕರು ಒಂದು ವಿಚಾರದಲ್ಲಿ ನಿಲುವು ತೆಗೆದುಕೊಂಡಾಗ ಅದಕ್ಕೆ ಬದ್ಧವಾಗಿರಬೇಕು. ಇಲ್ಲವೇ ದೂರ ಇರಬೇಕು’ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಹೇಳಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಯಾವ ಕಾರಣಕ್ಕೆ ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಅವರಂಥ ನಾಯಕರನ್ನು ಸಚಿವ ಸಂಪುಟದಿಂದ ತೆಗೆಯಬಾರದಿತ್ತು ಎಂಬುದು ನನ್ನ ಅಭಿಪ್ರಾಯ. ಆ ಬಗ್ಗೆ ನನಗೂ ಬೇಸರವಿದೆ. ತಪ್ಪೇ ಮಾಡಿದ್ದರೂ ಕರೆದು ಮಾತನಾಡಿಸಿ ಬುದ್ಧಿವಾದ ಹೇಳಿ ಸರಿಪಡಿಸುವ ಪ್ರಯತ್ನ ಮಾಡಬಹುದಿತ್ತು. ತಾಯಿ ಹಾಲು ಕುಡಿಯುವಾಗ ಮಗು ಒಮ್ಮೊಮ್ಮೆ ಕಚ್ಚುತ್ತದೆ, ಹಾಗಂತ ಮಗುವಿಗೆ ಹೊಡೆಯುವುದು ಸರಿ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.