ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಸಂಬಂಧ ಮತ್ತೊಬ್ಬ ಆರೋಪಿಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
‘ನಕಲಿ ಖಾತೆಗಳಿಂದ ಹಣ ಡ್ರಾ ಆದ ಮೇಲೆ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್‌ಎನ್‌ಎಲ್ ಮಹಿಳಾ ಅಧಿಕಾರಿಯೊಬ್ಬರ ಪತಿ ಕಾಕಿ ಶ್ರೀನಿವಾಸ್ ರಾವ್ ಅವರನ್ನು ಬಂಧಿಸಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಆರೋಪಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ನಗರಕ್ಕೆ ವಾಪಸ್ ಆದ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಲಾಗಿತ್ತು. ಹೆಚ್ಚಿನ ವಿಚಾರಣೆಗೆ ಒಂಬತ್ತು ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
‘ಗ್ರಾಫಿಕ್ಸ್ ಡಿಸೈನರ್ ಆಗಿದ್ದ ಆರೋಪಿ ಕಾಕಿ ಶ್ರೀನಿವಾಸ್, ಎರಡು ವರ್ಷದಿಂದ ಯಶವಂತಪುರದಲ್ಲಿ ನೆಲೆಸಿದ್ದರು. ಇದೇ ಪ್ರಕರಣದ ರೀತಿಯಲ್ಲೇ ಛತ್ತೀಸಗಢದ ಕೃಷಿ ಅಭಿವೃದ್ಧಿ ಮಂಡಳಿಯಲ್ಲಿ ನಡೆದಿದ್ದ ₹14 ಕೋಟಿ ಅವ್ಯವಹಾರ ಪ್ರಕರಣದಲ್ಲೂ ಶ್ರೀನಿವಾಸ್ ಬಂಧನಕ್ಕೆ ಒಳಗಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು’ ಎಂದು ಪೊಲೀಸರು ಹೇಳಿದರು.
ಹೈದರಾಬಾದ್‌ನಲ್ಲಿ ವರ್ಮಾ ಸ್ನೇಹ: ‘ಆರೋಪಿಯು ಕೆಲವು ವರ್ಷ ಹೈದರಾಬಾದ್‌ನಲ್ಲೂ ಗ್ರಾಫಿಕ್ಸ್ ಡಿಸೈನರ್ ಕೆಲಸ ಮಾಡುತ್ತಿದ್ದರು. ಆಗ ಪ್ರಕರಣದ ಪ್ರಮುಖ ಆರೋಪಿ ಸತ್ಯಾನಾರಾಯಣ ವರ್ಮಾ ಅವರ ಸ್ನೇಹವಾಗಿತ್ತು. ಛತ್ತೀಸಗಢದ ಕೃಷಿ ಅಭಿವೃದ್ಧಿ ಮಂಡಳಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ವರ್ಮಾ ಜತೆಗೆ ಶ್ರೀನಿವಾಸ್ ಕೈಜೋಡಿಸಿದ್ದರು. ವಾಲ್ಮೀಕಿ ನಿಗಮದ ಹಗರಣದಲ್ಲೂ ಸತ್ಯನಾರಾಯಣ ವರ್ಮಾ ಜತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದರು. ನಿಗಮದ ಹಣವನ್ನು ಹವಾಲಾ ಮೂಲಕ ನಗದು ರೂಪದಲ್ಲಿ ಪಡೆಯಲು ಕಾಕಿ ಶ್ರೀನಿವಾಸ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಅಂದಾಜು ₹10 ಕೋಟಿಯನ್ನು ನಗದು ರೂಪದಲ್ಲಿ ಶ್ರೀನಿವಾಸ್ ವರ್ಗಾವಣೆ ಮಾಡಿಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.