ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಮಾಜಿ ಸಚಿವ ನಾಗೇಂದ್ರ ವಿಚಾರಣೆ ತೀವ್ರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ಬಿ. ನಾಗೇಂದ್ರ
ಬಿ. ನಾಗೇಂದ್ರ   

ಬೆಂಗಳೂರು: ವಾಲ್ಮೀಕಿ ನಿಗಮದ ನಿಧಿ ದುರ್ಬಳಕೆ ಪ್ರಕರಣದಲ್ಲಿ ಶಾಸಕ ಬಿ.ನಾಗೇಂದ್ರ ಅವರನ್ನು ನ್ಯಾಯಾಲಯವು ಐದು ದಿನಗಳವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿದೆ. ಅದರ ಬೆನ್ನಲ್ಲೇ ಇ.ಡಿಯು ನಾಗೇಂದ್ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.

14 ದಿನಗಳ ಕಸ್ಟಡಿಗೆ ನೀಡಬೇಕು ಎಂದು ಕೇಳಲಾಗಿತ್ತು. ನ್ಯಾಯಾಧೀಶರು 5 ದಿನಗಳ ಕಸ್ಟಡಿಯನ್ನಷ್ಟೇ ನೀಡಿದ್ದಾರೆ. ಹೀಗಾಗಿ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದ್ದ ಇ.ಡಿ ಸಂಜೆಯವರೆಗೂ ವಿಚಾರಣೆ ನಡೆಸಿತ್ತು. ನಗರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ, ನಾಗೇಂದ್ರ ಅವರನ್ನು ತಡರಾತ್ರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.

ADVERTISEMENT

ಶನಿವಾರ ಬೆಳಿಗ್ಗೆ 6ಗಂಟೆಗೆ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರ ನಿವಾಸದಲ್ಲಿ ನಾಗೇಂದ್ರ ಅವರನ್ನು ಹಾಜರುಪಡಿಸಲಾಗಿತ್ತು. ಹಣ ದುರ್ಬಳಕೆ ಬಗ್ಗೆ ತನಗೇನೂ ತಿಳಿದಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗುತ್ತಿದೆ ಎಂದು ಅವರು ನ್ಯಾಯಾಧೀಶರ ಎದುರು ಹೇಳಿದರು ಎಂದು ಮೂಲಗಳು ಹೇಳಿವೆ.

ನಿಗಮದ ಅಧಿಕಾರಿಯಾಗಿದ್ದ ಎನ್‌.ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ‘ಡೆತ್‌ನೋಟ್‌’ನಲ್ಲಿ ಸಚಿವರ ಮೌಖಿಕ ಆದೇಶದ ಮೇರೆಗೆ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಬರೆದಿದ್ದರು. ಆಗ ನಾಗೇಂದ್ರ ಸಚಿವರಾಗಿದ್ದರು. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಬೇಕಿದೆ. ಜತೆಗೆ ಅವರು ತನಿಖೆಗೂ ಸಹಕಾರ ನೀಡುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆಹಾಕುವ ಅಗತ್ಯವಿದೆ. ಹೀಗಾಗಿ ಹೆಚ್ಚಿನ ಅವಧಿಗೆ ಕಸ್ಟಡಿಗೆ ನೀಡುವಂತೆ ಕೇಳಲಾಗಿತ್ತು. ಆದರೆ ಜುಲೈ 18ರವರೆಗೆ ಮಾತ್ರ ಕಸ್ಟಡಿ ದೊರೆತಿದೆ ಎಂದು ಮೂಲಗಳು ಹೇಳಿವೆ.

ಜುಲೈ 18ರ ಬೆಳಿಗ್ಗೆ 6 ಗಂಟೆಗೆ ನಾಗೇಂದ್ರ ಅವರು ನ್ಯಾಯಾಧೀಶರ ಎದುರು ಹಾಜರು‍ಪಡಿಸಬೇಕಿದೆ.

3 ಗಂಟೆಗೊಮ್ಮೆ ವಿಶ್ರಾಂತಿ, ದಿನಕ್ಕೊಮ್ಮೆ ತಪಾಸಣೆ: ತನಗೆ ಆರೋಗ್ಯ ಸಮಸ್ಯೆ ಇದೆ. ರಕ್ತದೊತ್ತಡದ ಸಮಸ್ಯೆ ಮತ್ತು ಸುಸ್ತು ಇದೆ. ವೈದ್ಯಕೀಯ ತಪಾಸಣೆಯ ಅಗತ್ಯವಿದೆ ಎಂದು ಸ್ವತಃ ನಾಗೇಂದ್ರ ಅವರು ನ್ಯಾಯಾಧೀಶರು ಎದುರು ಹೇಳಿದರು. ಹೀಗಾಗಿ ದಿನಕ್ಕೊಮ್ಮೆ ವೈದ್ಯಕೀಯ ತಪಾಸಣೆ ನಡೆಸಬೇಕು ಮತ್ತು ವಿಚಾರಣೆ ವೇಳೆ ಮೂರು ಗಂಟೆಗೊಮ್ಮೆ ವಿಶ್ರಾಂತಿ ನೀಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ಇ.ಡಿ ಮೂಲಗಳು ಹೇಳಿವೆ.

ಕಸ್ಟಡಿಗೆ ಪಡೆದ ನಂತರ ನಾಗೇಂದ್ರ ಅವರನ್ನು ಶಾಂತಿನಗರದ ಇ.ಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಸಂಜೆಯ ವೇಳೆಗೆ ನಾಲ್ವರು ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಇ.ಡಿ ಕಚೇರಿಯಲ್ಲೇ ಅವರನ್ನು ಇರಿಸಲಾಗಿದೆ.

ದದ್ದಲ್‌ಗಾಗಿ ಹುಡುಕಾಟ

ಹಗರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಇ.ಡಿ ಅಧಿಕಾರಿಗಳು ಶನಿವಾರ ಹುಡುಕಾಟ ನಡೆಸಿದರು. ಆದರೆ ದದ್ದಲ್‌ ಅವರು ಸಿಕ್ಕಿಲ್ಲ ಎನ್ನಲಾಗಿದೆ.

ದದ್ದಲ್‌ ಅವರನ್ನೂ ಇ.ಡಿ ಈಚೆಗೆ ವಿಚಾರಣೆಗೆ ಒಳಪಡಿಸಿತ್ತು. ಶುಕ್ರವಾರ ವಿಶೇಷ ತನಿಖಾ ದಳದ (ಎಸ್‌ಐಟಿ) ಎದುರು ದದ್ದಲ್‌ ವಿಚಾರಣೆಗೆ ಹಾಜರಾಗಿದ್ದರು. ಆಗ ದದ್ದಲ್‌ ಅವರು ನೀವೇ ನನ್ನನ್ನು ಬಂಧಿಸಿಬಿಡಿ ಎಂದು ಎಸ್‌ಐಟಿಗೆ ದುಂಬಾಲು ಬಿದ್ದಿದ್ದರು. ತಾವು ಬಂಧಿಸಿದರೂ, ಇ.ಡಿ ಅಧಿಕಾರಿಗಳು ಬಾಡಿ ವಾರೆಂಟ್‌ ಮೇಲೆ ನಿಮ್ಮನ್ನು ವಶಕ್ಕೆ ಪಡೆಯುತ್ತಾರೆ ಎಂದು ಎಸ್‌ಐಟಿ ಅಧಿಕಾರಿಗಳು ದದ್ದಲ್‌ ಅವರನ್ನು ಕಳುಹಿಸಿದ್ದರು.  

ಭೂಮಿ ಮಾರಿದ್ದವರಿಗೂ ಇ.ಡಿ ನೋಟಿಸ್‌?

ರಾಯಚೂರು: ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕೆಲವು ಕಡೆಗಳಲ್ಲಿ ಭೂಮಿ ಖರೀದಿಸಿರುವ ದಾಖಲೆಗಳು ಲಭ್ಯವಾಗಿರುವ ಕಾರಣ ಇ.ಡಿ ಅಧಿಕಾರಿಗಳು ಭೂಮಿ ಮಾರಾಟ ಮಾಡಿದವರಿಗೂ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಯಚೂರು ತಾಲ್ಲೂಕಿನ ಆಸ್ಕಿಹಾಳ ಗ್ರಾಮದಲ್ಲಿ ₹4 ಕೋಟಿ ಕೊಟ್ಟು, ದದ್ದಲ್ ಸಂಬಂಧಿ ಕಾರ್ತಿಕ್ ಎನ್ನುವವರು ಲಕ್ಷ್ಮಿದೇವಿ ಎನ್ನುವವರಿಂದ 3 ಎಕರೆ 30 ಗುಂಟೆ ಜಮೀನು ಖರೀದಿಸಿದ್ದಾರೆ ಎನ್ನಲಾಗಿದೆ.

ಕಾರ್ತಿಕ್ ಮತ್ತು ಆಂಜನೇಯ ಎಂಬುವವರ ಹೆಸರಲ್ಲಿ ಜಮೀನು ನೋಂದಣಿ ಮಾಡಿದ್ದು, ₹ 25 ಲಕ್ಷದಂತೆ ಮೂರು ಚೆಕ್‌ಗಳನ್ನು ಕಾರ್ತಿಕ್ ಮತ್ತು ಆಂಜನೇಯ ಎಂಬುವವರು ಲಕ್ಷ್ಮಿದೇವಿಗೆ ಕೊಟ್ಟಿದ್ದಾರೆ. ಉಳಿದ ಹಣವನ್ನ ನಗದು ರೂಪದಲ್ಲಿ ಹಣ ಸಂದಾಯ ಮಾಡಿದ ಆರೋಪವಿದೆ. 

ಲಕ್ಷ್ಮಿದೇವಿ ಅವರ ಮನೆ ಗೃಹಪ್ರವೇಶ ದಿನದಂದೇ ಬೆಂಗಳೂರಿನಿಂದ ಬಂದಿದ್ದ ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಮನೆ ಖರೀದಿಸಲು ಹಣ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.