ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಅವರು 2024ರ ಮೇ 26ರಂದು, ಶಿವಮೊಗ್ಗದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ, ‘ಮೇಲಿನವರ ಆದೇಶದಂತೆ ನಿಗಮದ ಹಣವನ್ನು ಬೇರೆ–ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ, ನಿಗಮವು ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಯಿತು. ಆನಂತರದ ಬೆಳವಣಿಗೆಗಳ ವಿವರ ಈ ಮುಂದಿನಂತಿದೆ.
2024ರ ಮೇ 28–29: ನಿಗಮದ ಹಣವನ್ನು ಯೂನಿಯನ್ ಬ್ಯಾಂಕ್‌ನ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕ ಎ.ರಾಜಶೇಖರನ್ ಅವರಿಂದ ಹೈಗ್ರೌಂಡ್ ಪೊಲೀಸರಿಗೆ ದೂರು
ಮೇ 31: ಆರಂಭದಲ್ಲಿ ಹೈಗ್ರೌಂಡ್ ಪೊಲೀಸರು ತನಿಖೆ ಆರಂಭಿಸಿದರೂ, ರಾಜ್ಯ ಸರ್ಕಾರವು ಅಪರಾಧ ತನಿಖಾ ದಳದ (ಸಿಐಡಿ) ಆರ್ಥಿಕ ಅಪರಾಧಗಳ ವಿಭಾಗದ ಎಡಿಜಿಪಿ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು
ಜೂನ್ 1–24: ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರುಗಣ್ಣವರ್ ಬಂಧಿಸಿದ ಎಸ್‌ಐಟಿ. ಅಕ್ರಮಕ್ಕೆ ನೆರವಾಗಿದ್ದ ಆರೋಪದಲ್ಲಿ ಸತ್ಯನಾರಾಯಣ ವರ್ಮಾ, ಚಂದ್ರಮೋಹನ್ ಮತ್ತು ಸತ್ಯನಾರಾಯಣ ಸಹಚರ ಸಾಯಿತೇಜ್ ಬಂಧನ. ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ವಿಚಾರಣೆ
ಶಾಸಕ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಸೇರಿ ಒಟ್ಟು 12 ಮಂದಿ ಬಂಧನ
ಜೂನ್ 29: ಅಕ್ರಮವಾಗಿ ವರ್ಗಾವಣೆಯಾಗಿತ್ತು ಎನ್ನಲಾದ ₹94.5 ಕೋಟಿಯಲ್ಲಿ ಆರೋಪಿಗಳಿಂದ ₹28 ಕೋಟಿ ವಶಕ್ಕೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇದ್ದ ₹45 ಕೋಟಿ ಮೊತ್ತದ ಠೇವಣಿ, ಸುಮಾರು ₹4 ಕೋಟಿ ಮೌಲ್ಯದ ಐಷಾರಾಮಿ ಕಾರುಗಳ ಮುಟ್ಟುಗೋಲು
ಆಗಸ್ಟ್ 5: ಎಸ್‌ಐಟಿಯಿಂದ ಆರೋಪ ಪಟ್ಟಿ ಸಲ್ಲಿಕೆ. ನಿಗಮದ ಪ್ರಧಾನ ವ್ಯವಸ್ಥಾಪಕ ಮತ್ತು ಇತರ ಅಧಿಕಾರಿಗಳಿಂದಲೇ ಕೃತ್ಯ ಎಂದ ಎಸ್‌ಐಟಿ
2024ರ ಜೂನ್ 6ರಿಂದ 2025ರ ಜುಲೈ 1: ತಮ್ಮ ಬ್ಯಾಂಕ್‌ನ ಗ್ರಾಹಕರ ಖಾತೆಗಳಲ್ಲಿ ಇದ್ದ ₹89.62 ಕೋಟಿಯಷ್ಟು ಹಣವನ್ನು ಅಕ್ರಮವಾಗಿ ಬೇರೆ–ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಕೆಲ ಅಪರಿಚಿತ ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಯೂನಿಯನ್ ಬ್ಯಾಂಕ್‌ನ ಕೇಂದ್ರ ಕಚೇರಿಯಿಂದ ಸಿಬಿಐಗೆ ಪತ್ರ ಯೂನಿಯನ್ ಬ್ಯಾಂಕ್‌ನ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ ಸಿಬಿಐ ಈ ಬಗ್ಗೆ ಆರ್‌ಬಿಐಗೆ ಮಾಹಿತಿ ನೀಡಿತ್ತು. ನಂತರ ಜಾರಿ ನಿರ್ದೇಶನಾಲಯಕ್ಕೂ (ಇ.ಡಿ) ಪತ್ರ ಬರೆದಿತ್ತು. ಹತ್ತಾರು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣವಾದ್ದರಿಂದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯೂ ತನಿಖೆಯ ಅಗತ್ಯವಿದೆ ಎಂದು ಇ.ಡಿಗೆ ತಿಳಿಸಿತ್ತು. ಜತೆಗೆ ಸಿಬಿಐ ತಾನೂ ತನಿಖೆ ಮುಂದುವರಿಸಿತ್ತು. ಆದರೆ ತನಿಖೆಯ ಅಂಶಗಳನ್ನು ಬಹಿರಂಗಪಡಿಸಿರಲಿಲ್ಲ. ಈಗ ರಾಜ್ಯ ಹೈಕೋರ್ಟ್‌ನ ಸೂಚನೆಯಂತೆ ತನಿಖೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಜುಲೈ 10: ಸಿಬಿಐ ಬರೆದಿದ್ದ ಪತ್ರದ ಆಧಾರದಲ್ಲಿ ಪ್ರಕರಣ (ಇಸಿಐಆರ್) ದಾಖಲಿಸಿಕೊಂಡ ಇ.ಡಿ. ರಾಜ್ಯದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ. ಬಿ.ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಆಪ್ತರು ಮತ್ತು ಸಂಬಂಧಿಕರ ತೀವ್ರ ವಿಚಾರಣೆ
ಜುಲೈ 12: ಇ.ಡಿ ಅಧಿಕಾರಿಗಳಿಂದ ಬಿ.ನಾಗೇಂದ್ರ ಅವರ ಬಂಧನ. ನಿಗಮದ ಖಾತೆಗಳಿಂದ ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದ್ದ ಹಣದಲ್ಲಿ ₹20 ಕೋಟಿಯಷ್ಟನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇ.ಡಿಯಿಂದ ಮಾಹಿತಿ
ಸೆಪ್ಟೆಂಬರ್ 9: ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಅಕ್ಟೋಬರ್ 9: ‘ಶಾಸಕ ಬಿ.ನಾಗೇಂದ್ರ ನಿಗಮದ ನಿಧಿ ಅಕ್ರಮ ವರ್ಗಾವಣೆ ಹಗರಣದ ಸಂಚುಕೋರ. ಅವರ ಆಣತಿಯಂತೆಯೇ ನಿಗಮದ ಹಣವನ್ನು ಅಕ್ರಮವಾಗಿ ಹೈದರಾಬಾದ್‌ನ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು’ ಎಂದು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ
ಅಕ್ಟೋಬರ್ 15: ‘ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಹಣದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ 7 ಲಕ್ಷಕ್ಕೂ ಹೆಚ್ಚು ಮತದಾರರಿಗೆ ₹14.80 ಕೋಟಿ ಹಂಚಲಾಗಿದೆ’ ಎಂದು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ 2025ರ
2025ರ ಜೂನ್ 11: ಕಾಂಗ್ರೆಸ್ ಸಂಸದ ಇ.ತುಕಾರಾಂ ಶಾಸಕರಾದ ಬಿ.ನಾಗೇಂದ್ರ ನಾರಾ ಭರತ್ ರಡ್ಡಿ ಕಂಪ್ಲಿ ಗಣೇಶ್ ಮತ್ತು ಎನ್.ಟಿ.ಶ್ರೀನಿವಾಸ್ ಅವರ ಮನೆ ಹಾಗೂ ಕಚೇರಿಗಳು ಸೇರಿ ರಾಜ್ಯದ 18 ಕಡೆ ಇ.ಡಿ ಅಧಿಕಾರಿಗಳಿಂದ ಶೋಧ
ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಟೀಕೆ ತೀವ್ರವಾದ ಬೆನ್ನಲ್ಲೇ ಅಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು 2024ರ ಜೂನ್ 6ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎಸ್‌ಐಟಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು. ಇ.ಡಿ ಅವರನ್ನು ಜುಲೈ 12ರಂದು ಬಂಧಿಸಿತ್ತು. ಅಕ್ಟೋಬರ್ 14ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ನೀಡಿದ ನಂತರ ಅವರು ಬಿಡುಗಡೆಯಾದರು. ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್ ಅವರ ಖಾತೆಗಳಿಗೆ ನಿಗಮದ ಹಣ ವರ್ಗಾವಣೆಯಾಗಿದೆ ಎಂಬುದನ್ನು ಸಿಬಿಐ ಪತ್ತೆ ಮಾಡಿದೆ. ನಾಗೇಂದ್ರ ನಿಗಮದ ವ್ಯವಸ್ಥಾಪಕರಾಗಿದ್ದ ಪದ್ಮನಾಭ ಉದ್ಯಮಿ ಸತ್ಯನಾರಾಯಣ ವರ್ಮಾ ನಡುವೆ ಮಾತುಕತೆಯನ್ನು ನೆಕ್ಕಂಟಿ ನಾಗರಾಜ್ ಏರ್ಪಡಿಸಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.