ADVERTISEMENT

‘ಅಮೃತಧಾರೆ’ ಎದೆಹಾಲು ಬ್ಯಾಂಕ್‌ಗೆ ಚಾಲನೆ

ಅಪಾಯಕಾರಿ ಹೆರಿಗೆ ನಿಭಾಯಿಸುವ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:03 IST
Last Updated 8 ಮಾರ್ಚ್ 2022, 16:03 IST
ಅಪಾಯಕಾರಿ ಹೆರಿಗೆ ನಿಭಾಯಿಸುವ ಕಟ್ಟಡವನ್ನು ಡಾ.ಕೆ. ಸುಧಾಕರ್ ಪರಿಶೀಲಿಸಿದರು. ಸಂಸದ ಪಿ.ಸಿ. ಮೋಹನ್ ಇದ್ದಾರೆ.
ಅಪಾಯಕಾರಿ ಹೆರಿಗೆ ನಿಭಾಯಿಸುವ ಕಟ್ಟಡವನ್ನು ಡಾ.ಕೆ. ಸುಧಾಕರ್ ಪರಿಶೀಲಿಸಿದರು. ಸಂಸದ ಪಿ.ಸಿ. ಮೋಹನ್ ಇದ್ದಾರೆ.   

ಬೆಂಗಳೂರು: ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ ಎದೆ ಹಾಲು ಬ್ಯಾಂಕ್‌ ‘ಅಮೃತಧಾರೆ’ಗೆ ಮಂಗಳವಾರ ಅಧಿಕೃತ ಚಾಲನೆ ದೊರೆತಿದೆ.ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿತವಾದ ಮೊದಲ ತಾಯಂದಿರ ಎದೆ ಹಾಲು ಬ್ಯಾಂಕ್ ಇದಾಗಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಎದೆ ಹಾಲಿನ ಬ್ಯಾಂಕ್ ಹಾಗೂಅಪಾಯಕಾರಿ ಹೆರಿಗೆ ನಿಭಾಯಿಸುವ ಕಟ್ಟಡ ಉದ್ಘಾಟಿಸಿದರು. ‘ತಾಯಿಯ ಎದೆಹಾಲಿಗಿಂತ ಅಮೃತ ಬೇರೆ ಇಲ್ಲ. ರಾಜ್ಯದಲ್ಲಿ ನಾಲ್ಕು ಕಡೆ ಎದೆ ಹಾಲು ಸಂಗ್ರಹ ಕೇಂದ್ರವಿದೆ. ಈ ಕೇಂದ್ರ ಹೊಂದಿದ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹಿರಿಮೆಗೆ ವಾಣಿವಿಲಾಸ ಆಸ್ಪತ್ರೆ ಭಾಜನವಾಗಿದೆ. ಎದೆಹಾಲು ವಂಚಿತ ಮಕ್ಕಳಿಗೆ ಈ ಕೇಂದ್ರ ನೆರವಾಗಲಿದೆ’ ಎಂದು ಹೇಳಿದರು.

72 ಹಾಸಿಗೆಗಳು:‘ಅಪಾಯಕಾರಿ ಹೆರಿಗೆ ನಿಭಾಯಿಸುವ ಕಟ್ಟಡವು ಒಟ್ಟು 72 ಹಾಸಿಗೆಗಳನ್ನು ಹೊಂದಿವೆ. ಇದರಲ್ಲಿ 28 ಶಿಶುಗಳ ತೀವ್ರ ನಿಗಾ ಘಟಕ (ಎನ್ಐಸಿಯು) ಹಾಸಿಗೆ ಹಾಗೂ ತಲಾ 22 ಮಕ್ಕಳ ತೀವ್ರ ನಿಗಾ ಘಟಕ (ಐಸಿಯು) ಮತ್ತು ಹೆರಿಗೆ ಐಸಿಯು ಹಾಸಿಗೆಗಳು ಇವೆ.ಮಾತೃ ವಂದನಾ, ನಗುಮಗು, ಜನನಿ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ’ ಎಂದರು.

ADVERTISEMENT

‘27 ಲೀ. ಎದೆಹಾಲು ಸಂಗ್ರಹ’

‘ಎದೆಹಾಲು ಬ್ಯಾಂಕಿನಲ್ಲಿ ಈವರೆಗೆ27 ಲೀಟರ್ ಎದೆಹಾಲು ಸಂಗ್ರಹವಾಗಿದೆ. 21 ಲೀಟರ್ ಹಾಲನ್ನು 90 ಮಕ್ಕಳಿಗೆ ನೀಡಲಾಗಿದೆ. ರಾಜ್ಯದಲ್ಲಿಶಿಶು ಮರಣ ಪ್ರಮಾಣ (ಐಎಂಆರ್) ಸಾವಿರಕ್ಕೆ 21 ಇದೆ. ದೇಶದ ಸರಾಸರಿ ಇದಕ್ಕಿಂತ ಅಧಿಕ ಇದೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

‘ಅವಧಿ ಪೂರ್ವ ಜನಿಸಿದ ಶಿಶುಗಳು, ಅಸ್ವಸ್ಥ ಶಿಶುಗಳು, ಅನಾಥ ಶಿಶುಗಳು, ಮೃತಪಟ್ಟ ತಾಯಂದಿರ ಶಿಶುಗಳು, ರೋಗಗ್ರಸ್ತ ಬಾಣಂತಿಯರ ಶಿಶುಗಳು ಹಾಗೂ ಎದೆಹಾಲು ಉತ್ಪಾದನೆ ಆಗದಿರುವಬಾಣಂತಿಯರಿಗೆ ಈ ಕೇಂದ್ರದಿಂದ ಎದೆಹಾಲನ್ನು ದಾನ ಮಾಡಲಾಗುತ್ತದೆ’ ಎಂದು ವಾಣಿವಿಲಾಸ ಆಸ್ಪತ್ರೆ ವೈದ್ಯರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.