ADVERTISEMENT

ಮುಂಗಾರು ಪ್ರವೇಶಕ್ಕೆ ‘ವಾಯು’ ಅಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 18:23 IST
Last Updated 11 ಜೂನ್ 2019, 18:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಈ ಬಾರಿ ಮುಂಗಾರು ಮಳೆ ರಾಜ್ಯ ಪ್ರವೇಶಿಸಲು ‘ವಾಯು’ ಚಂಡಮಾರುತ ಅಡ್ಡಿಯಾಗಿ ಪರಿಣಮಿಸಿದ್ದು,ದಶಕದ ನಂತರ ಮುಂಗಾರು ಪ್ರವೇಶ ಇಷ್ಟೊಂದು ತಡವಾಗಿದೆ.

ಜೂನ್ 8ರಂದೇ ಮುಂಗಾರು ಕೇರಳವನ್ನು ಪ್ರವೇಶಿಸಿದೆ. ಆದರೆ, ‘ವಾಯು’ ಚಂಡಮಾರುತ ತೀವ್ರಗೊಂಡು ಮೋಡಗಳನ್ನು ಉತ್ತರದ ಕಡೆಗೆ ಹೊತ್ತೊಯ್ದಿದೆ. ಹೀಗಾಗಿ ಮುಂಗಾರು ದುರ್ಬಲ ಗೊಂಡಿತುಎಂದುರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು. ಜೂನ್‌ 13ರಂದು ಗೋವಾ, ಗುಜರಾತ್‌ ಕರಾವಳಿಯಲ್ಲಿ ಚಂಡಮಾರುತ ಹಾದು ಹೋಗಲಿದ್ದು, ನಂತರ ಅದು ದುರ್ಬಲವಾಗುವ ಸಾಧ್ಯತೆ ಇದೆ.ಇದರ ನಡುವೆಯೇ, ‌ಬುಧವಾರ ಅಥವಾ ಗುರುವಾರ ಮುಂಗಾರು ಅಧಿಕೃತವಾಗಿ ರಾಜ್ಯವನ್ನು ಪ್ರವೇಶಿಸಿದರೂ ಅಷ್ಟೇನೂ ಪ್ರಭಾವ ಬೀರುವುದಿಲ್ಲ. ಚಂಡಮಾರುತ ಸಂಪೂರ್ಣ ಕಡಿಮೆಯಾದರೆ ಜೂನ್ 16ರ ನಂತರ ಮುಂಗಾರು ಬಲಿಷ್ಠವಾಗುವ ಸಾಧ್ಯತೆ ಇದೆ ಎಂದರು.

ಎರಡು ದಿನ ಕೊಡಗಿನಲ್ಲಿ ಭಾರಿ ಮಳೆ

ADVERTISEMENT

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ.

ಜೂನ್‌ 15ರಿಂದ 20ರ ನಡುವೆ ಮಳೆಯ ಪ್ರಮಾಣ ತಗ್ಗಲಿದೆ. ಆದರೆ, 20ರ ನಂತರ ಮತ್ತೆ ಮುಂಗಾರು ಮಳೆ ಚುರುಕು ಪಡೆಯಲಿದ್ದು, ಗಾಳಿ–ಮಳೆಯ ಸಂದರ್ಭದಲ್ಲಿ ಸಾರ್ವಜನಿಕರು, ಜಿಲ್ಲೆಗೆ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ನಾಪೋಕ್ಲು, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ಬಿಡುವು ಕೊಟ್ಟು ಬಿರುಸಿನ ಮಳೆ ಸುರಿಯಿತು. ನಾಪೋಕ್ಲು ಹಾಗೂ ಭಾಗಮಂಡಲಕ್ಕೆ ವಿದ್ಯುತ್‌ ಪೂರೈಸುವ ಮಾರ್ಗದಲ್ಲಿ ಸೋಮವಾರ ರಾತ್ರಿ ಬೀಸಿದ ಗಾಳಿಗೆ ಕಂಬಗಳು ಧರೆಗುರುಳಿದ್ದು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು.

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆ ಬಿರುಸಿನ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.