ಶಂಕರ ಬಿದರಿ
ಬೆಂಗಳೂರು: ಲಿಂಗಾಯತ ಪಂಥಕ್ಕೆ ಸೇರಿದ ಅತ್ಯಂತ ಹಿಂದುಳಿದ, ವೃತ್ತಿ ಆಧಾರಿತ ಜಾತಿಗಳನ್ನು ಪ್ರವರ್ಗ 3 ‘ಬಿ’ಗೆ ಸೇರಿಸುವ ಮೂಲಕ ಹಿಂದುಳಿದ ವರ್ಗಗಳ ಆಯೋಗ ಘೋರ ಅಪರಾಧ ಎಸಗಿದೆ ಎಂದು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನಾಲ್ಕು ವರ್ಣಗಳಿಗೆ ಸೇರಿದ 99ಕ್ಕೂ ಹೆಚ್ಚು ವೃತ್ತಿಗಳ ಜನರು 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಪಂಥಕ್ಕೆ ಸೇರ್ಪಡೆಯಾದರು. ಅದೇ ವೃತ್ತಿಯ ಕೆಲವರು ಸನಾತನ ಹಿಂದೂ ಧರ್ಮದ ಭಾಗವಾಗಿಯೇ ಮುಂದುವರಿದಿದ್ದಾರೆ. ಹಿಂದೂ ಧರ್ಮ ಹಾಗೂ ಲಿಂಗಾಯತ ಪಂಥಗಳಲ್ಲಿ ವಿಭಜಿತವಾದರೂ ಎರಡೂ ಕಡೆ ಗುರುತಿಸಿಕೊಂಡಿರುವ ಅವರ ವೃತ್ತಿ ಇಂದಿಗೂ ಒಂದೇ ತೆರನಾಗಿವೆ. ಆದರೆ, ಹಿಂದುಳಿದ ಜಾತಿಗಳನ್ನು ವಿಂಗಡಿಸುವಾಗ ಆಯೋಗ ಭೇದ ಮಾಡಿದೆ. ಇಂತಹ ತಾರತಮ್ಯ ಸರಿಯಲ್ಲ ಎಂದು ದೂರಿದರು.
‘99ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡ ಕಾರಣಕ್ಕಾಗಿಯೇ ಲಿಂಗಾಯತವನ್ನು ಒಂದು ಪಂಥ ಅಥವಾ ಧರ್ಮ ಎಂದು ಪರಿಗಣಿಸಬೇಕು ಎಂದು ಮಹಾಸಭಾ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. ಆದರೂ, ಹಿಂದೂ ಧರ್ಮದ ಒಂದು ಭಾಗವಾಗಿಯೇ ಗುರುತಿಸಲಾಗುತ್ತಿದೆ. ಈಗ ಒಂದೇ ತೆರನಾದ ವೃತ್ತಿ ಆಧಾರಿತ ಜಾತಿಗಳನ್ನು ವಿಭಜಿಸಿದ್ದಾರೆ. ಲಿಂಗಾಯತ ಪಂಥದ ಜಾತಿಗಳನ್ನು ಪ್ರವರ್ಗ 3 ‘ಬಿ’ಗೆ ಸೇರಿಸಿ, ಹಿಂದೂ ಧರ್ಮದ ಅದೇ ಜಾತಿಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಪ್ರವರ್ಗಗಳಿಗೆ ಸೇರಿಸಲಾಗಿದೆ. ಈ ತಾರತಮ್ಯವನ್ನು ಖಂಡಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.