ADVERTISEMENT

ಧರ್ಮಸ್ಥಳ ವಿರುದ್ಧ ಅಪಪ್ರಚಾರ: ಸಿಬ್ಬಂದಿ ಜೊತೆ ನೋವು ತೋಡಿಕೊಂಡ ವೀರೇಂದ್ರ ಹೆಗ್ಗಡೆ

ತನಿಖೆ ಸಿಬಿಐಗೆ ವಹಿಸಲು ಒತ್ತಾಯಿಸಿದ್ದೇ ನಾನು ಎಂದು ಪರೋಕ್ಷವಾಗಿ ಸೌಜನ್ಯಾ ಕೊಲೆ ಪ್ರಕರಣದ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 14:15 IST
Last Updated 19 ಜುಲೈ 2023, 14:15 IST
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ   

ಮಂಗಳೂರು: ‘ಈ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಅಂದಿನ ಮುಖ್ಯಮಂತ್ರಿ ಅವರನ್ನು ಕೋರಿದ್ದೇ ನಾನು. ಕೆಲವರು ದುರುದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನೋವು ತಂದಿದೆ’ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಕ್ಷೇತ್ರದ ವಿವಿಧ ಸಂಸ್ಥೆಗಳ ಸಿಬ್ಬಂದಿ ಜೊತೆ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸೌಜನ್ಯಾ ಪ್ರಕರಣವನ್ನು ಉಲ್ಲೇಖಿಸದೇ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಹಿಂದೆ ಏನೇನಾಗಿದೆ ಎಂಬುದು ನಿಮಗೆ ಗೊತ್ತು. ಕೆಲವರು ಆ ವಿಷಯವನ್ನು ಈಗ ತೆಗೆದುಕೊಂಡು ಮಾತಾಡುವ ವಿಚಾರಗಳಿಗೂ ನಮಗೂ ಸಂಬಂಧವೇ ಇಲ್ಲ. ಈ ಪ್ರಕರಣದ ತನಿಖೆಯನ್ನು ನಡೆಸುವಂತೆ ಗೃಹ ಇಲಾಖೆಗೆ ಮೊದಲು ಪತ್ರ ಬರೆದದ್ದೇ ನಾನು. ಈಗಲೂ ತನಿಖೆ ಇನ್ನಷ್ಟು ಮುಂದುವರಿಸಲಿ. ಆದರೆ, ಕ್ಷೇತ್ರದ ಹೆಸರನ್ನು ಏಕೆ ಸುಮ್ಮನೆ ಎಳೆಯುತ್ತಾರೋ ಗೊತ್ತಿಲ್ಲ. ಅವರಿಗೆ ಅಮಾಯಕ ಹುಡುಗಿಯ ಸಾವಿಗಿಂತ ಈ ಕ್ಷೇತ್ರವನ್ನು ಹೇಗಾದರೂ ಮಲಿನ ಮಾಡಬೇಕು ಎಂಬ ಉದ್ದೇಶವಿರುವುದು ಕಾಣುತ್ತದೆ’ ಎಂದರು.

ADVERTISEMENT

ಅನವಶ್ಯಕವಾಗಿ ಏಕೆ ಶತ್ರುತ್ವ ಬೆಳೆಸುತ್ತಿದ್ದಾರೆ?

‘ನನಗೆ ಯಾವ ಸಂಕೋಚ; ಸಂದೇಹವೂ ಇಲ್ಲ. ನಾನು ಹಿಂದೆ ಹೇಗಿದ್ದೇನೋ ಹಾಗೆಯೇ ಇದ್ದೇನೆ. ಬೆಳಿಗ್ಗೆಯಿಂದ ಸಂಜೆವರೆಗೆ ಅನೇಕ ಕಾರ್ಯಗಳಲ್ಲಿ ತೊಡಗಿರುವುದರಿಂದ ನನಗೆ ಮೈಲಿಗೆ ಅಂಟುವುದಿಲ್ಲ. ಅನವಶ್ಯಕವಾಗಿ ಏಕೆ ಶತ್ರುತ್ವ ಬೆಳೆಸುತ್ತಿದ್ದಾರೆ ಎಂಬುದಕ್ಕೆ ಕಾರಣ ಏನು ತಿಳಿಯುತ್ತಿಲ್ಲ. ಸಂಭಾಷಣೆ ಪ್ರಾರಂಭ ಆಗಬಾರದು ಎಂಬ ಕಾರಣಕ್ಕೆ ನಾನು ಈ ವರೆಗೆ ಮಾತನಾಡಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಇಂದು ಬೆಳಿಗ್ಗೆಯೂ ಆರು ಜನ ಬಂದು, ‘ನಿಮಗೇ ಹೀಗಾದರೆ ಹೇಗೆ ತಡೆದುಕೊಳ್ಳುವುದು’ ಎಂದು ಕಣ್ಣೀರು ಹಾಕಿ ಹೋದರು. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯ ಇಲ್ಲ. ಇದರಿಂದ ಅವರಿಗೆ ಸುಮ್ಮನೆ ಪ್ರಚಾರ. ನನ್ನ ಆತ್ಮ ಮತ್ತು ವ್ಯವಹಾರ ಶುದ್ಧವಾಗಿದೆ. ಯಾವುದಕ್ಕೂ ವಿಚಲಿತನಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರ್ಯಕ್ರಮಗಳನ್ನೂ ಧರ್ಮಸ್ಥಳದವರು ಚೆನ್ನಾಗಿ ಮಾಡುತ್ತಾರೆ ಎಂಬ ಹೆಸರು ಇದೆ. ಅದು ನಿಮ್ಮಿಂದಾಗಿ ಬಂದಿರುವುದು. 1.5 ಕೋಟಿ ಮಂದಿಗೆ ವಿಮೆ ಮಾಡಿಸಿದ್ದು, 87 ಲಕ್ಷ ಮಂದಿಗೆ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಮಾಡಿಸಿದ್ದು ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆಯವರು. ನೀವು ಮಾಡುವ ಸತ್ಕಾರ್ಯಗಳಿಗಾಗಿ ಕೆಲವರು ನನ್ನನ್ನು ದ್ವೇಷ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ನೈತಿಕ ಶಕ್ತಿಗಿಂತ ದೊಡ್ಡ ಶಕ್ತಿ ಯಾವುದೂ ಅಲ್ಲ

‘ನಾವು ಹೋಗುವ ದಾರಿಯನ್ನು ಬಿಟ್ಟು ಅಚೀಚೆ ನೋಡುವುದಿಲ್ಲ. ದಾರಿ ಮಧ್ಯೆ ಮೋಡ ಬಂದಿದೆ. ಅದನ್ನು ದೇವರೇ ತೆಗೆಯಬೇಕು. ಯಾವ ಅನ್ಯಾಯಕ್ಕೂ ಸಹಾಯ ಮಾಡುವವ ನಾನಲ್ಲ. ಅಪಪ್ರಚಾರ ಮಾಡುವವರಿಗೆ ಏನಾದರೂ ಮಾಡಲಿಕ್ಕೆ ಅಭಿಮಾನಿಗಳು ಸಿದ್ಧರಿದ್ದಾರೆ. ಅಭಿಮಾನಿಗಳಿಗೆ ನಾನು ಹೇಳುವುದಿಷ್ಟೇ–ನೀವೂ ಏನೂ ಮಾಡಬೇಡಿ. ನೈತಿಕ ಶಕ್ತಿಗಿಂತ ದೊಡ್ಡ ಶಕ್ತಿ ಯಾವುದೂ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.