ADVERTISEMENT

ಶಾಸಕ ವೀರೇಂದ್ರ ವಿರುದ್ಧ ಬೆಟ್ಟಿಂಗ್‌ ಪ್ರಕರಣ; ಕ್ಯಾಸಿನೊ- ₹12 ಕೋಟಿ ಪತ್ತೆ

ಇ.ಡಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 20:28 IST
Last Updated 23 ಆಗಸ್ಟ್ 2025, 20:28 IST
ಶಾಸಕ ಕೆ.ಸಿ.ವೀರೇಂದ್ರ
ಶಾಸಕ ಕೆ.ಸಿ.ವೀರೇಂದ್ರ   

ಬೆಂಗಳೂರು: ಅಕ್ರಮವಾಗಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಬೆಟ್ಟಿಂಗ್‌ ನಡೆಸಿದ ಪ್ರಕರಣದಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಮನೆ ಮತ್ತು ಕ್ಯಾಸಿನೊಗಳಲ್ಲಿ ₹12 ಕೋಟಿ ನಗದು ಸೇರಿ ₹25 ಕೋಟಿಗೂ ಹೆಚ್ಚು ಮೊತ್ತದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಟ್ಟಿಂಗ್‌ ಸಂಬಂಧ ಹಣ ಅಕ್ರಮ ವರ್ಗಾವಣೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವೀರೇಂದ್ರ ಮತ್ತು ಅವರ ಕ್ಯಾಸಿನೊಗಳ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಗೋವಾ, ಮುಂಬೈ, ಜೋಧ‍ಪುರ, ಗ್ಯಾಂಗ್ಟಕ್‌ ಸೇರಿ ದೇಶದ 31 ಸ್ಥಳಗಳಲ್ಲಿ ಶುಕ್ರವಾರ ದಾಳಿ ನಡೆಸಿದ್ದರು.

ದಾಳಿಯ ವೇಳೆ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ನಾಲ್ಕು ಐಷಾರಾಮಿ ಕಾರುಗಳ ಒಟ್ಟು ಮೌಲ್ಯ ₹25 ಕೋಟಿಯಷ್ಟಾಗುತ್ತದೆ. ಇದಲ್ಲದೇ ಹತ್ತಾರು ಸ್ಥಿರಾಸ್ತಿಗಳ ಪತ್ರಗಳು, 17 ಬ್ಯಾಂಕ್‌ ಖಾತೆಗಳು ಮತ್ತು ನಾಲ್ಕು ಲಾಕರ್‌ಗಳು ಪತ್ತೆಯಾಗಿವೆ. ಎಲ್ಲವುಗಳ ಪರಿಶೀಲನೆಯ ನಂತರ ಆಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಬಹುದು ಎಂದು ಇ.ಡಿ ಮೂಲಗಳು ತಿಳಿಸಿವೆ.

ADVERTISEMENT

ಮುಂದುವರೆದ ವಿಚಾರಣೆ: ‘ವೀರೇಂದ್ರ ಅವರ ಸೋದರ ಕೆ.ಸಿ.ನಾಗರಾಜ್‌ ಮತ್ತು ಅವರ ಮಗ ಪೃಥ್ವಿ ಎನ್‌. ರಾಜ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ವೀರೇಂದ್ರ ಅವರ ಆನ್‌ಲೈನ್‌ ಬೆಟ್ಟಿಂಗ್‌ನ ಪ್ಲಾಟ್‌ಫಾರಂಗಳನ್ನು ಈ ಇಬ್ಬರು ನಿರ್ವಹಣೆ ಮಾಡುತ್ತಿದ್ದರು. ದುಬೈನಲ್ಲಿನ ಕಾಲ್‌ಸೆಂಟರ್‌ ಮತ್ತು ಷೆಲ್‌ ಕಂಪನಿಗಳನ್ನೂ ಇವರೇ ನೋಡಿಕೊಳ್ಳುತ್ತಿದ್ದರು. ಅವರ ವಿಚಾರಣೆ ಮುಂದುವರೆದಿದೆ’ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.

‘ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಸಿನೊ ಉದ್ಯಮಿ ಮತ್ತು ಹವಾಲಾ ಆಪರೇಟರ್‌ ಸಮುಂದರ್‌ ಸಿಂಗ್‌ನನ್ನು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಸಮುಂದರ್ ಅವರನ್ನೂ ಬೆಂಗಳೂರಿಗೆ ಕರೆತರಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಗೋವಾದ ಕ್ಯಾಸಿನೊದಲ್ಲಿ ಪತ್ತೆಯಾದ ಅಪಾರ ಮೊತ್ತದ ನಗದು
ಕ್ಯಾಸಿನೊ ಒಂದರ ಲಾಕರ್‌ನಲ್ಲಿ ಪತ್ತೆಯಾದ ನಗದು
ಕ್ಯಾಸಿನೊ ಒಂದರಲ್ಲಿ ಪತ್ತೆಯಾದ ವಿದೇಶಿ ಕರೆನ್ಸಿಗಳು

ಗ್ಯಾಂಗ್ಟಕ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರು ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದು, ಬೆಂಗಳೂರಿನತ್ತ ಪಯಣ ಶನಿವಾರ ರಾತ್ರಿ ಬೆಂಗಳೂರು ತಲುಪುವ ನಿರೀಕ್ಷೆ

ನಗ–ನಗದು ವಿವರ ₹12 ಕೋಟಿವೀರೇಂದ್ರ ಮನೆ ಮತ್ತು ಕ್ಯಾಸಿನೊಗಳಲ್ಲಿ ವಶಕ್ಕೆ ಪಡೆಯಲಾದ ನಗದು ₹1 ಕೋಟಿಮೌಲ್ಯದ ವಿದೇಶಿ ಕರೆನ್ಸಿಗಳು ₹6 ಕೋಟಿಮೌಲ್ಯದ ಚಿನ್ನಾಭರಣ 10 ಕೆ.ಜಿ.ಬೆಳ್ಳಿಯ ವಸ್ತುಗಳು 17 ಬ್ಯಾಂಕ್‌ ಖಾತೆಗಳ ವಿವರ 4 ಬ್ಯಾಂಕ್‌ ಲಾಕರ್‌ಗಳ ವಿವರ 4 ಐಷಾರಾಮಿ ಕಾರುಗಳು. ವೀರೇಂದ್ರ ಅವರ ಅಭಿಮಾನಿಗಳ ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ಆಧರಿಸಿ ಈ ಕಾರುಗಳನ್ನು ಪತ್ತೆ ಮಾಡಲಾಗಿದೆ * ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕದ ಹಲವು ಕ್ಯಾಸಿನೊಗಳ ಸದಸ್ಯತ್ವ ಕಾರ್ಡ್‌ಗಳು ಪತ್ತೆ * 40ಕ್ಕೂ ಹೆಚ್ಚು ಡೆಬಿಟ್‌ ಕಾರ್ಡ್‌ಗಳು ಮತ್ತು ವಿದೇಶಗಳಲ್ಲಿನ ಪಂಚತಾರಾ ಹೋಟೆಲ್‌ಗಳ ಸದಸ್ಯತ್ವ ಕಾರ್ಡ್‌ಗಳು

ಗ್ಯಾಂಗ್ಟಕ್‌ನಲ್ಲಿ ಬಂಧನ

ವೀರೇಂದ್ರ ಅವರ ಕುಟುಂಬದ ಒಡೆತನದ ಪಪ್ಪೀ’ಸ್‌ ಕ್ಯಾಸಿನೊ ಪ್ರೈಡ್‌ನ ಒಂದು ಶಾಖೆ ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿದೆ. ಅದನ್ನು ಸ್ಥಳೀಯ ಕ್ಯಾಸಿನೊ ಉದ್ಯಮಿಗಳಿಗೆ ಭೋಗ್ಯಕ್ಕೆ ನೀಡುವ ಸಂಬಂಧದ ಮಾತುಕತೆಗಾಗಿ ವೀರೇಂದ್ರ ಮತ್ತು ಸಹಚರರು ಗುರುವಾರ ರಾತ್ರಿ ಗ್ಯಾಂಗ್ಟಕ್‌ಗೆ ತೆರಳಿದ್ದರು. ಇದೇ ವೇಳೆ ಗ್ಯಾಂಗ್ಟಕ್‌ನ ಕ್ಯಾಸಿನೊಗಳ ಮೇಲೆ ದಾಳಿ ನಡೆಸಲಾಗಿತ್ತು. ‘ವೀರೇಂದ್ರ ಮತ್ತು ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಶನಿವಾರ ಬೆಳಿಗ್ಗೆ ವೀರೇಂದ್ರ ಅವರನ್ನು ಬಂಧಿಸಿ ಗ್ಯಾಂಗ್ಟಕ್‌ನ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಬೆಂಗಳೂರಿಗೆ ಕರೆತರಲು ಟ್ರಾನ್ಸಿಟ್‌ ರಿಮ್ಯಾಂಡ್ ಪಡೆಯಲಾಗಿದೆ’ ಎಂದು ಇ.ಡಿ ಮಾಹಿತಿ ನೀಡಿದೆ. ‘ಆರೋಪಿಯನ್ನು ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತದೆ. ರಾತ್ರಿ 11ರ ವೆಳೆಗೆ ಬೆಂಗಳೂರು ತಲುಪಬಹುದು. ನಂತರ ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುತ್ತದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.