ADVERTISEMENT

ಲಾವಂಚ ಬೇರುಳ್ಳ ಆಯುರ್ವೇದ ಮಾಸ್ಕ್‌

ಬೆಳಗಾವಿಯ ಆದಿತ್ಯ ಗಾರ್ಮೆಂಟ್ಸ್‌ನಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 11:01 IST
Last Updated 18 ಜೂನ್ 2020, 11:01 IST
ಬೆಳಗಾವಿಯಲ್ಲಿ ಲಾವಂಚ ಬೇರುಳ್ಳ ಆಯುರ್ವೇದ ಮಾಸ್ಕ್‌ ಅನ್ನು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಗುರುವಾರ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಲಾವಂಚ ಬೇರುಳ್ಳ ಆಯುರ್ವೇದ ಮಾಸ್ಕ್‌ ಅನ್ನು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಗುರುವಾರ ಬಿಡುಗಡೆ ಮಾಡಿದರು   

ಬೆಳಗಾವಿ: ಇಲ್ಲಿನ ಆದಿತ್ಯ ಗಾರ್ಮೆಂಟ್ಸ್‌ನಿಂದ ತಯಾರಿಸಿರುವ ಲಾವಂಚ ಬೇರುಳ್ಳ ಆಯುರ್ವೇದ ಮಾಸ್ಕ್‌ (ಮುಖಗವಸು) ಅನ್ನು ಗುರುವಾರ ಖಾಸಬಾಗ್‌ನ ಬನಶಂಕರಿ ದೇವಸ್ಥಾನ ಆವರಣದಲ್ಲಿ ನಡೆದ ಮಾಸ್ಕ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಬಿಡುಗಡೆ ಮಾಡಿದರು.

‘ಹತ್ತಿ ಬಟ್ಟೆಯ ಮಾಸ್ಕ್‌ (3 ಲೇಯರ್) ಇದಾಗಿದೆ. ಒಳಭಾಗದಲ್ಲಿ ಸಣ್ಣದಾದ ಜೇಬಿನ ರೀತಿ ಮಾಡಿ ಅದರಲ್ಲಿ ಲಾವಂಚದ ಬೇರಿನ ತುಂಡುಗಳನ್ನು ಹಾಕಲಾಗಿರುತ್ತದೆ. ಇದರಿಂದ ಧರಿಸುವವರಿಗೆ ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ. ಸುವಾಸನೆಯೂ ಸಿಗುತ್ತದೆ. ಲಾವಂಚವು ಆಯುರ್ವೇದ ಔಷಧಿಯ ಗುಣಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೂ ಸಹಕಾರಿಯಾಗಿದೆ. ಮಾಸ್ಕೊಂದಕ್ಕೆ ₹ 60 ದರ ನಿಗದಿಪಡಿಸಿದ್ದೇವೆ’ ಎಂದು ಗಾರ್ಮೆಂಟ್ಸ್‌ನ ಅಮಿತ್ ಹನಮನ್ನವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ತೊಳೆದು ಒಣಗಿಸಿ ಪುನರ್‌ ಬಳಸಬಹುದಾದ ಮೊದಲ ಆಯುರ್ವೇದ ಮಾಸ್ಕ್‌ ಇದಾಗಿದೆ. ಸಹಜ ಸುವಾಸನೆ ಬೀರುವ ಲಾವಂಚದ ಬೇರುಗಳಲ್ಲಿ ಔಷಧ ಗುಣಗಳಿವೆ. 4ರಿಂದ 6 ತಿಂಗಳವರೆಗೆ ತೊಳೆದು ಪುನರ್‌ ಬಳಕೆ ಮಾಡಬಹುದಾಗದೆ’ ಎಂದು ತಿಳಿಸಿದರು.

‘ಕೋವಿಡ್–19 ಲಾಕ್‌ಡೌನ್‌ನಿಂದಾಗಿ ನೇಕಾರರಿಗೆ ಕೆಲಸ ಇಲ್ಲವಾಗಿದೆ. ಹೀಗಾಗಿ ಕೆಲವರಿಗೆ ಮಾಸ್ಕ್‌ ತಯಾರಿಸುವ ಕೆಲಸ ಕೊಟ್ಟಿದ್ದೇವೆ’ ಎಂದು ತಿಳಿಸಿದರು.

‘ನಾವೆಲ್ಲರೂ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಲೇಬೇಕಾಗಿದೆ. ಇದಕ್ಕೆ ಮುಖಗವಸುಗಳು ಪೂರಕವಾಗಿವೆ. ಮಾಸ್ಕ್‌ ಧರಿಸುವ ಮೂಲಕ ಸೋಂಕಿನಿಂದ ದೂರ ಇರಬಹುದು’ ಎಂದು ಸಂಜಯ ಪಾಟೀಲ ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಮುಖಂಡರಾದ ಶಂಕರ ಬುಚಡಿ, ಸುರೇಶ ಕಿತ್ತೂರ, ಪ್ರದೀಪ ತೆಲಸಂಗ, ರಮೇಶ ಸೊಂಟಕ್ಕಿ, ಗೀತಾ ಸುತಾರ, ಭುಜಂಗ್ ಭಂಡಾರಿ, ಗಜಾನನ ಗುಂಜೇರಿ, ಆದಿತ್ಯ ಗಾರ್ಮೆಂಟ್ಸ್‌ನ ಪ್ರಮುಖರಾದ ನಾಗೇಶ್ ಭಂಡಾರಿ, ಅಮಿತ್ ಹನಮನ್ನವರ, ಅರುಣ ಢಗೆ, ಅನಿಲ್ ಢವಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.