ADVERTISEMENT

ಮತದಾರರಿಗೆ ಹಣ ಹಂಚಿಕೆ ವಿಡಿಯೊ ವೈರಲ್‌

ಶಿರಾ ವಿಧಾನಸಭಾ ಕ್ಷೇತ್ರ: ಬಿಜೆಪಿ ಮುಖಂಡರಿಗೆ ಸ್ಥಳೀಯರ ತರಾಟೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 20:05 IST
Last Updated 27 ಅಕ್ಟೋಬರ್ 2020, 20:05 IST
ಶಿರಾ ಕ್ಷೇತ್ರದ ಗ್ರಾಮವೊಂದರಲ್ಲಿ ಸೋಮವಾರ ರಾತ್ರಿ ಮತದಾರರಿಗೆ ಹಣ ಹಂಚುತ್ತಿರುವ ದೃಶ್ಯ
ಶಿರಾ ಕ್ಷೇತ್ರದ ಗ್ರಾಮವೊಂದರಲ್ಲಿ ಸೋಮವಾರ ರಾತ್ರಿ ಮತದಾರರಿಗೆ ಹಣ ಹಂಚುತ್ತಿರುವ ದೃಶ್ಯ   

ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಮಹಿಳಾ ಮತದಾರರಿಗೆ ಬಿಜೆಪಿ ಬೆಂಬಲಿಗರು ಎನ್ನಲಾದವರುಸೋಮವಾರ ರಾತ್ರಿ ಹಣ ಹಂಚುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಣ ಹಂಚಲು ಹಾಸನದಿಂದ ಬಂದಿದ್ದ ಬಿಜೆಪಿ ಮುಖಂಡರನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ದೃಶ್ಯಗಳು ವಿಡಿಯೊದಲ್ಲಿವೆ.ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಬೆಂಬಲಿಗರು ಎಂದು ಅವರು ಹೇಳಿಕೊಂಡಿದ್ದಾರೆ.

ಹಾಸನ, ಮಂಡ್ಯ ಸೇರಿದಂತೆ ಕ್ಷೇತ್ರದ ಹೊರಗಿನಿಂದ ಬಂದಿರುವ ಬಿಜೆಪಿ ಮುಖಂಡರು ಹಣ ಹಂಚುತ್ತಿದ್ದಾರೆ ಎನ್ನುವ ಸುದ್ದಿ ಎರಡು ದಿನಗಳಿಂದ ಶಿರಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ADVERTISEMENT

ಶಿರಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆಯರನ್ನು ಸೇರಿಸಿರುವ ಮುಖಂಡರು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ.‌ ಅಭಿವೃದ್ಧಿಗಾಗಿ ಇಲ್ಲೂ ಬಿಜೆಪಿ ಬೆಂಬಲಿಸಿ. ಒಂದು ವೇಳೆ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರು ಗೆದ್ದರೆ ನಿಮ್ಮ ಹಳ್ಳಿಗೆ ಏನೂ ಅನುದಾನ ಬರುವುದಿಲ್ಲ’ ಎಂದು ಭಾಷಣ ಮಾಡಿರುವ ದೃಶ್ಯಗಳು ವಿಡಿಯೊದಲ್ಲಿವೆ.

‘ಶಾಸಕ ಪ್ರೀತಂಗೌಡ ಅವರು ಅರಿಸಿನ, ಕುಂಕುಮಕ್ಕೆ ಎಂದು ಈಗ ಮಹಿಳೆಯರಿಗೆ ತಲಾ ₹200 ನೀಡಲು ಹೇಳಿದ್ದಾರೆ. ಮತ್ತೆ ಮುಂದಿನ ವಾರ ₹ 200 ನೀಡುತ್ತೇವೆ. ಮಹಿಳೆಯರನ್ನು ಯಾರೂ ಗಮನಿಸಿಕೊಳ್ಳುವುದಿಲ್ಲ. ಕೊನೆಯಲ್ಲಿ ನಿಮಗೆ ಏನೊ ಕೊಡ
ಬೇಕೊ ಅದನ್ನು ತಲುಪಿಸುತ್ತೇವೆ. ನೀವು ಕಮಲದ ಗುರುತಿಗೆ ಮತ ಹಾಕಿ’ ಎಂದು ಮನವಿ ಮಾಡಿ
ಕೊಳ್ಳಲಾಗಿದೆ.

ಹಾಸನದ ಬಿಜೆಪಿ ಮುಖಂಡ ಎಂದು ಹೇಳಿಕೊಂಡ ವ್ಯಕ್ತಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದು
ಕೊಂಡಿರುವದೃಶ್ಯ ಮತ್ತೊಂದು ವಿಡಿಯೊದಲ್ಲಿದೆ.

‘ಏಕೆ ಬಂದಿದ್ದೀರಿ. ಹಣ ಹಂಚಲು ಬಂದಿದ್ದೀರಾ’ ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದ್ದಾರೆ. ಆಗ ಆ ವ್ಯಕ್ತಿ ‘ಮತ ಕೇಳಲು ನಾವು ಹಾಸನದಿಂದ ಬಂದಿದ್ದೇವೆ, ಪ್ರೀತಂಗೌಡ ಬೆಂಬಲಿಗರು’ ಎಂದು ತಿಳಿಸಿದ್ದಾರೆ. ‘ಹಗಲು ಹೊತ್ತಿನಲ್ಲಿ ಪ್ರಚಾರ ಮಾಡಿ. ರಾತ್ರಿ ಏಕೆ ಬಂದಿದ್ದೀರಿ’ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವು
ದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.