ADVERTISEMENT

ವಿಧಾನಪರಿಷತ್‌: ಉಪ ಸಭಾಪತಿ ಮಾತಿಗೆ ಕೆರಳಿದ ಬಿ.ಕೆ. ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 16:27 IST
Last Updated 17 ಡಿಸೆಂಬರ್ 2024, 16:27 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಸುವರ್ಣ ವಿಧಾನಸೌಧ (ಬೆಳಗಾವಿ): ‘ಕಾಯ್ದೆ ತಿದ್ದುಪಡಿಗೆ ಮಂಡಿಸಿರುವ ಮಸೂದೆಯಲ್ಲಿ ಪ್ರಸ್ತಾಪಿಸಿರುವ ಅಂಶಕ್ಕೆ ಸೀಮಿತವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು. ಅದನ್ನು ಹೊರತುಪಡಿಸಿ ಸಂಬಂಧಪಡದ ವಿಷಯಗಳ ಕುರಿತು ಮಾತನಾಡಲು ಅವಕಾಶ ಇಲ್ಲ’ ಎಂದು ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ನೀಡಿದ ಸಲಹೆಗೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಖಾಸಗಿ ವಲಯದ ಚಾಣಕ್ಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸರ್ಕಾರದ ಪ್ರತಿನಿಧಿಯಾಗಿ ತಜ್ಞರೊಬ್ಬರನ್ನು ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ‘ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ’ಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಂಡಿಸಿದರು.

ಮಸೂದೆಯ ಕುರಿತು ಮಾತನಾಡಿದ ಹರಿಪ್ರಸಾದ್, ‘ಇದು ಅಕ್ರಮವನ್ನು ಸಕ್ರಮ ಮಾಡುವ ಮಸೂದೆ. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ದೇವನಹಳ್ಳಿಯಲ್ಲಿ ಕೆಐಎಡಿಬಿ 106 ಎಕರೆ ಜಮೀನನನ್ನು ಕೇವಲ ₹2.90 ಕೋಟಿಗೆ 10 ವರ್ಷದ ಗುತ್ತಿಗೆ ಕಂ ಕ್ರಯಪತ್ರದ ಆಧಾರದಲ್ಲಿ ನೀಡಿದೆ. ಅಂದಾಜು ₹600 ಕೋಟಿ ಮೌಲ್ಯದ ಜಾಗವನ್ನು ರೈತರಿಂದ ಕಿತ್ತುಕೊಂಡು ನೀಡಲಾಗಿದೆ. ಈ ಸಂಸ್ಥೆಯ ಧ್ಯೇಯೋದ್ದೇಶ ಏನೆಂದು ಯಾರಿಗೂ ಗೊತ್ತಿಲ್ಲ. ಈ ಮಸೂದೆಯನ್ನು ವಾಪಸ್‌ ಪಡೆದುಕೊಂಡು ಹಿಂದಿನ ಸರ್ಕಾರ ಮಾಡಿದ ಅಕ್ರಮವನ್ನು ಮೊದಲು ಸರಿ ಮಾಡಬೇಕು’ ಎಂದರು.

ADVERTISEMENT

ಆಗ ಬಿಜೆಪಿಯ ಸಿ.ಟಿ. ರವಿ, ‘ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡುವ ನಿರ್ಧಾರವನ್ನು ಹಿಂದಿನ ಸರ್ಕಾರ ತೆಗೆದುಕೊಂಡಿತ್ತು. ಆಧಾರ ಇಲ್ಲದೆ ಆರೋಪ ಮಾಡಬಾರದು. ಅಕ್ರಮ ಆಗಿದೆ ಎನ್ನುವುದಕ್ಕೆ ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ’ ಎಂದರು. 

ಈ ವೇಳೆ ಹರಿಪ್ರಸಾದ್‌ ಮಾತನಾಡಲು ಮುಂದಾದಾಗ, ಸಭಾಪತಿ ಪೀಠದಲ್ಲಿದ್ದ ಎಂ.ಕೆ. ಪ್ರಾಣೇಶ್, ಅವಕಾಶ ನೀಡಲಿಲ್ಲ. ಆಗ ಕೆರಳಿದ ಹರಿಪ್ರಸಾದ್‌, ‘ನೀವು ಅವರ ಪರವಾಗಿದ್ದೀರಿ’ ಎಂದರು. ಇಬ್ಬರ ಮಧ್ಯೆ ವಾಗ್ವಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.