ವಿಧಾನ ಪರಿಷತ್ ಕಲಾಪದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಎಸ್. ಎಸ್ ಮಲ್ಲಿಕಾರ್ಜುನ, ಎಂ.ಬಿ ಪಾಟೀಲ ಮಾತುಕತೆಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ
ನೇಕಾರರಿಗೆ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯ ಮತ್ತು ನೆರವಿನ ಬಗ್ಗೆ ಸದಸ್ಯ ಕೇಶವ ಪ್ರಸಾದ್ ಎಸ್. ಕೇಳಿದ್ದ ಪ್ರಶ್ನೆಗೆ ಜವಳಿ ಸಚಿವ ಶಿವಾನಂದ ಎಸ್. ಪಾಟೀಲ ಉತ್ತರಿಸಿದರು. ಕಡೆಗೆ, ಬಿಜೆಪಿಯ ಸದಸ್ಯ ಹಣಮಂತ ನಿರಾಣಿ ಅವರ ಹೆಸರು ಹೇಳಿ ಮಾತು ಮುಗಿಸಿದರು. ತಕ್ಷಣವೇ ಎದ್ದು ನಿಂತ ನಿರಾಣಿ, ‘ಸಭಾಧ್ಯಕ್ಷರೇ, ನನಗೆ ಮಾತನಾಡಲು ಒಂದು ನಿಮಿಷ ಅವಕಾಶ ನೀಡಿ’ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಇದು ಪ್ರಶ್ನೋತ್ತರ. ನಿನ್ನ ಪ್ರಶ್ನೆ ಇದ್ದಾಗಷ್ಟೇ ಮಾತನಾಡಬೇಕು’ ಎಂದರು. ನಿರಾಣಿ, ‘ಅವರು ನನ್ನ ಹೆಸರು ತೆಗೆದುಕೊಂಡಿದ್ದಾರೆ. ಹೀಗಾಗಿ ನಾನು ಮಾತನಾಡಲೇಬೇಕು’ ಎಂದು ಪಟ್ಟುಹಿಡಿದರು.
ಒಂದೆರಡು ಕ್ಷಣ ಸುಮ್ಮನಿದ್ದ ಹೊರಟ್ಟಿ ಅವರು ಸಚಿವರನ್ನು ಉದ್ದೇಶಿಸಿ, ‘ಇನ್ನು ಮುಂದೆ ಅವರ ಹೆಸರು ತೆಗೆದುಕೊಳ್ಳಬೇಡಿ’ ಎಂದರು. ‘ನಿಮ್ಮ ಹೆಸರು ತೆಗೆದುಕೊಳ್ಳುವುದಿಲ್ಲವಂತೆ, ನೀವಿನ್ನು ಕೂರಿ’ ಎಂದು ನಿರಾಣಿ ಅವರನ್ನು ಕೂರಿಸಿದರು.
‘ದಾಳಿಂಬೆ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ₹9,000ದಷ್ಟು ಸಹಾಯಧನ ನೀಡಲಾಗುತ್ತಿದ್ದು, ಇದು ಯಾವುದಕ್ಕೂ ಸಾಲುವುದಿಲ್ಲ. ತೆಂಗು ಬೆಳೆಗಾರರಿಗೆ ಹೆಕ್ಟೇರ್‌ಗೆ ₹35,000 ನೀಡಲಾಗುತ್ತಿದೆ. ದಾಳಿಂಬೆ ಬೆಳೆಗಾರರಿಗೆ ರಾಜ್ಯ ಸರ್ಕಾರವು ಹೆಕ್ಟೇರ್‌ಗೆ ₹1 ಲಕ್ಷ ನೀಡಬೇಕು’ ಎಂದು ಬಿಜೆಪಿಯ ಪಿ.ಎಚ್.ಪೂಜಾರ್ ಅವರು ಪ್ರಶ್ನೋತ್ತರದ ಅವಧಿಯಲ್ಲಿ ಒತ್ತಾಯಿಸಿದರು.
ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ನೀಡಿದ ಯಾವ ಉತ್ತರಕ್ಕೂ ತೃಪ್ತರಾಗದ ಪೂಜಾರ್, ₹1 ಲಕ್ಷ ಕೊಡಲೇಬೇಕು ಎಂದು ಪಟ್ಟುಹಿಡಿದರು. ಒಂದು ಹಂತದಲ್ಲಿ, ‘ತೆಂಗು ಅಭಿವೃದ್ಧಿ ಬೋರ್ಡ್‌ಗೆ ಕೇಂದ್ರ ಸರ್ಕಾರವು ಸಹಾಯಧನ ನೀಡುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರವೂ ಒಂದು ಪಾಲು ಸೇರಿಸಿ ₹35,000 ನೀಡುತ್ತಿದೆ’ ಎಂದರು.
ಅವರ ಮಾತು ಮುಗಿಯುವ ಮುನ್ನವೇ ಸಚಿವ ಮಲ್ಲಿಕಾರ್ಜುನ ಅವರು, ‘ನೀವೂ ಬನ್ನಿ, ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗೋಣ. ದಾಳಿಂಬೆ ಬೆಳೆಗೆ ಪ್ಯಾಕೇಜ್ ಕೇಳೋಣ’ ಎಂದರು. ಆಗ ಪೂಜಾರ್ ಅವರು ಮಾತನ್ನು ಅಲ್ಲಿಗೇ ನಿಲ್ಲಿಸಿ, ಕೂತರು.
ರಸಗೊಬ್ಬರ ಪೂರೈಕೆಯಲ್ಲಿನ ವ್ಯತ್ಯಯದ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾತನಾಡುತ್ತಾ, ‘ಶಿವರಾಜ್ ಸಿಂಗ್ ಚೌಹಾಣ್ ಅವರು, ಮಾವು ಬೆಳೆಗೆ ಸಂಬಂಧಿಸಿದಂತೆ ನಾನು ಮಾಡಿದ್ದ ಮನವಿಯನ್ನು ಒಂದು ದಿನದಲ್ಲೇ ಈಡೇರಿಸಿದ್ದರು’ ಎನ್ನುತ್ತಿದ್ದಂತೆ ಜೆಡಿಎಸ್‌ನ ಟಿ.ಎ.ಶರವಣ ಎದ್ದುನಿಂತರು. ‘ನಮ್ಮ ನಾಯಕರು ನೆರವು ನೀಡಿದ್ದರು. ಅದನ್ನೂ ಹೇಳಿ’ ಎಂದರು.
ಇದರಿಂದ ಸಿಟ್ಟಿಗೆದ್ದ ಚಲುವರಾಯಸ್ವಾಮಿ, ‘ಕೇಂದ್ರ ಕೃಷಿ ಸಚಿವರು ಮಂಜೂರು ಮಾಡಿದ ಮೇಲೆ, ತಾನೇ ಮಾಡಿಸಿದೆ ಎಂದು ಕ್ರೆಡಿಟ್ ತೆಗೆದುಕೊಳ್ಳಲು ನಿಮ್ಮ ನಾಯಕರು ಕರೆ ಮಾಡಿದ್ದು. ನಿನ್ನನ್ನು ಜನತಾದಳದಿಂದ ಆಯ್ಕೆ ಮಾಡಿದ್ದಾರೆ, ಹೀಗಾಗಿ ನೀನು ಅವರ ಬಗ್ಗೆ ಮಾತನಾಡಬೇಕು ಎಂಬುದು ನನಗೂ ಅರ್ಥವಾಗುತ್ತದೆ. ರಾಜ್ಯದ ಕೆಲಸ ಮಾಡಲೆಂದೇ ಜನರು ನಿಮ್ಮ ನಾಯಕರನ್ನು ಕೇಂದ್ರಕ್ಕೆ ಕಳುಹಿಸಿದ್ದು. ನೀನು ಸುಮ್ಮನೆ ಕೂರು’ ಎಂದು ಗುದ್ದು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.