ADVERTISEMENT

ಚರ್ಚೆಯೇ ಇಲ್ಲದೆ ಮುಗಿದ ವಿಧಾನಪರಿಷತ್ ಕಲಾಪ

ಆಡಳಿತ ಪಕ್ಷದ ಸದಸ್ಯರ ಆಕ್ರೋಶ, ಪ್ರತಿಭಟನೆ; ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:56 IST
Last Updated 29 ಜನವರಿ 2026, 0:56 IST
<div class="paragraphs"><p>ವಿಧಾನ ಪರಿಷತ್‌ನಲ್ಲಿ ನಿಯಮಾವಳಿ ಪುಸ್ತಕವನ್ನು&nbsp;ಛಲವಾದಿ ನಾರಾಯಣಸ್ವಾಮಿ ಹರಿದು ಹಾಕಿದರು. ಉಪಸಭಾಪತಿ ಪ್ರಾಣೇಶ್ ಉಪಸ್ಥಿತರಿದ್ದರು </p></div>

ವಿಧಾನ ಪರಿಷತ್‌ನಲ್ಲಿ ನಿಯಮಾವಳಿ ಪುಸ್ತಕವನ್ನು ಛಲವಾದಿ ನಾರಾಯಣಸ್ವಾಮಿ ಹರಿದು ಹಾಕಿದರು. ಉಪಸಭಾಪತಿ ಪ್ರಾಣೇಶ್ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.

ಬೆಂಗಳೂರು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಅಡ್ಡಿ, ರಾಷ್ಟ್ರಗೀತೆಗೆ ರಾಜ್ಯಪಾಲರ ಅಗೌರವದ ಆರೋಪ, ವಿರೋಧ ಪಕ್ಷದ ನಾಯಕರು ಸದನದ ನಿಯಮಗಳ ಪುಸ್ತಕ ಹರಿದು ಹಾಕಿದ ವಿಷಯಗಳು ವಿಧಾನಪರಿಷತ್‌ನಲ್ಲಿ ದಿನಪೂರ್ತಿ ಗದ್ದಲ, ಆಕ್ರೋಶ, ಆರೋಪ, ವಾಗ್ವಾದಕ್ಕೆ ಕಾರಣವಾಗಿ, ಬುಧವಾರದ ಕಲಾಪ ಚರ್ಚೆಯಿಲ್ಲದೆ ಮುಗಿಯಿತು.

ADVERTISEMENT

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಖಂಡನೆ– ನಿಂದನೆ ಬಗ್ಗೆ ಬೆಳಿಗ್ಗೆಯಿಂದಲೇ ವಾಗ್ವಾದ ನಡೆಯಿತು. ಎರಡು ಬಾರಿ ಮುಂದೂಡಿ, ಭೋಜನದ ನಂತರ ಆರಂಭವಾದ ಕಲಾಪದಲ್ಲಿ, ರಾಷ್ಟ್ರಗೀತೆಗೆ ಅವಮಾನದ ವಿಷಯ ಬಗ್ಗೆ ಪ್ರಸ್ತಾಪವಾಯಿತು. ಇದಾದ ಮೇಲೆ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನ ಪರಿಷತ್‌ನ ನಿಯಮಗಳ ಪುಸ್ತಕವನ್ನು ಹರಿದು ಹಾಕಿದ ಪ್ರಕರಣದಿಂದ ಆಡಳಿತ– ವಿರೋಧ ಪಕ್ಷಗಳ ಸದಸ್ಯರ ವಾದ–ಪ್ರತಿವಾದಗಳ ಕೋಲಾಹಲದಲ್ಲೇ ದಿನದ ಕಲಾಪ ಮುಕ್ತಾಯಗೊಂಡಿತು.

ಭೋಜನದ ನಂತರ ಆರಂಭವಾದ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ‘ರಾಜ್ಯಪಾಲರ ಭಾಷಣದ ಬಗ್ಗೆ ಸಭಾನಾಯಕರು ಹೇಳಿಕೆಯನ್ನು ಖಂಡಿಸುತ್ತಾ ನಮ್ಮ ಸದಸ್ಯರು ಸಭಾಪತಿ ಅವರ ಪಿಠದ ಎದುರು ಧರಣಿ ನಡೆಸುತ್ತಿದ್ದಾರೆ. ಅದಕ್ಕೆ ಪರಿಹಾರ ನೀಡದೆ ನೀವು ಪ್ರಶ್ನೋತ್ತರ ತೆಗೆದುಕೊಳ್ಳುವುದು ಸರಿಯಲ್ಲ’ ಎಂದು ನಾರಾಯಣಸ್ವಾಮಿ ಆರೋಪಿಸಿದರು.

‘ನಿನ್ನೆಯಿಂದಲೂ ನಾವು ಕೇಳುತ್ತಿದ್ದೇವೆ. ಕಲಾಪ ನಿಯಮದಂತೆ ನಡೆಯುತ್ತಿಲ್ಲ. ಹಾಗಿದ್ದ ಮೇಲೆ, ನಮಗೆ ಈ ‘ರೂಲ್‌ ಬುಕ್‌’ ಏಕೆ ಬೇಕು’ ಎಂದು  ನಾರಾಯಣಸ್ವಾಮಿ ಪುಸ್ತಕವನ್ನು ಹರಿದು ಹಾಕಿದರು. ಆಕ್ರೋಶಗೊಂಡ ಕಾಂಗ್ರೆಸ್‌ ಸದಸ್ಯರು ಸಭಾನಾಯಕರ ಆಸನದ ಬಳಿ ಬಂದು, ‘ಸದನಕ್ಕೆ ಸಂವಿಧಾನದಂತಿರುವ ನಿಯಮಗಳ ಪುಸ್ತಕವನ್ನು ಹರಿದು ಹಾಕಿರುವುದು ಸರಿಯಲ್ಲ, ವಿರೋಧ ಪಕ್ಷದ ನಾಯಕರನ್ನು ಹೊರಹಾಕಬೇಕು’ ಎಂದು ಜಮಾಯಿಸಿ ಒತ್ತಾಯಿಸಿದರು.

‘ಸಭಾಪತಿಯವರ ಪೀಠಕ್ಕೆ ಚ್ಯುತಿ ತಂದಿದ್ದಾರೆ, ಅವರನ್ನು ವಜಾ ಮಾಡಬೇಕು, ಅಮಾನತು ಮಾಡಬೇಕು. ವಿರೋಧ ಪಕ್ಷದ ನಾಯಕರು ಸಂವಿಧಾನದ ವಿರೋಧಿ, ಡೌನ್‌ಡೌನ್‌ ಬಿಜೆಪಿ’ ಎಂದು ಕಾಂಗ್ರೆಸ್‌ನ ಐವನ್‌ ಡಿಸೋಜ, ನಾಗರಾಜ್‌ ಯಾದವ್‌, ಶಿವಕುಮಾರ್‌, ರಮೇಶ್‌ ಬಾಬು, ಆರತಿ ಕೃಷ್ಣ, ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ– ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮಧ್ಯ ಪ್ರವೇಶಿಸಿದ ಹೊರಟ್ಟಿ, ‘ನಿಯಮಗಳ ಪುಸ್ತಕ ಹರಿಯುವುದು ಸರಿಯಲ್ಲ. ಇದಕ್ಕೆ ವಿಷಾದ ಹೇಳಬೇಕು’ ಎಂದರು. ನಾರಾಯಣ ಸ್ವಾಮಿ ಮಾತನಾಡಲು ಮುಂದಾದಾಗ, ‘ವಿಷಾದವಲ್ಲ, ಅವರು ಕ್ಷಮೆ ಕೋರಬೇಕು. ಅವರನ್ನು ಅಮಾನತು ಮಾಡಬೇಕು’ ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮತ್ತೆ ಕೋಲಾಹಲ ಉಂಟಾಯಿತು. ಸಭಾಪತಿಯವರು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.

ಮತ್ತೆ ಕಲಾಪ ಆರಂಭವಾದ ಮೇಲೂ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಬಿಜೆಪಿ ಸದಸ್ಯರೂ ಧರಣಿ ನಡೆಸುತ್ತಿದ್ದರು. ‘ವಿರೋಧ ಪಕ್ಷದ ನಾಯಕರು ವಿಷಾದ ವ್ಯಕ್ತಪಡಿಸುತ್ತಾರೆ, ಅವಕಾಶ ನೀಡಿ’ ಎಂದು ಸಭಾಪತಿ ಮನವಿ ಮಾಡಿದರೂ, ಕಾಂಗ್ರೆಸ್‌ ಸದಸ್ಯರು ಒಪ್ಪಲಿಲ್ಲ. ‘ವಿಷಾದವಲ್ಲ ಕ್ಷಮೆ ಕೋರಬೇಕು, ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

‘ನಿಯಮದ ಪ್ರಕಾರ, ಸದನದಲ್ಲಿ ಘೋಷಣೆ ಕೂಗುವಂತಿಲ್ಲ, ಕಾಗದ ಪತ್ರಗಳನ್ನು ಹರಿಯುವಂತಿಲ್ಲ. ಎರಡೂ ಕಡೆ ಸದಸ್ಯರೂ ತಪ್ಪು ಮಾಡಿದ್ದೀರಿ’ ಎಂದು ಹೊರಟ್ಟಿ ಹೇಳಿದರು. ಗದ್ದಲ ಮುಂದುವರಿದಾಗ,  ಕಲಾಪವನ್ನು ಗುರುವಾರಕ್ಕೆ ಮುಂದೂಡಿಕೆಯಾಯಿತು.

ರಾಜ್ಯಪಾಲ ಜತೆ ಮಾತನಾಡಿಲ್ಲ: ಹೊರಟ್ಟಿ

‘ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಬಂದಾಗ ಹೊರ ಹೋದಾಗ ಸದನದಲ್ಲಿ ಇದ್ದಾಗ ಅವರೊಂದಿಗೆ ನಾನು ಏನೂ ಮಾತಾಡಿಲ್ಲ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

‘ವಿಧಾನಸಭೆಯಲ್ಲಿ ಮಾತನಾಡಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ‘ರಾಷ್ಟ್ರಗೀತೆ ಮುಗಿಸಿ ಹೋಗಿ ಎಂದು ಮೂರು ಬಾರಿ ರಾಜ್ಯಪಾಲರಿಗೆ ಸಭಾಪತಿಯವರು ಹೇಳಿದ್ದಾರೆ’ ಎಂದು ಹೇಳಿದ್ದಾರೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಷಯ ಪ್ರಸ್ತಾಪಿಸಿದರು.

ಆಗ ‍ಪ್ರತಿಕ್ರಿಯಿಸಿದ ಹೊರಟ್ಟಿ ‘ಯಾವ ಮಾತೂ ಆಡಿಲ್ಲ. ವಿಧಾನ ಸೌಧದ ಮೆಟ್ಟಿಲುಗಳವರೆಗೆ ಹೋಗಿ ಕಳುಹಿಸಿಕೊಟ್ಟು ಬಂದಿದ್ದೇನೆ’ ಎಂದರು.

‘ತಪ್ಪು ಹೇಳಿಕೆ ನೀಡಿರುವ ಎಚ್.ಕೆ. ಪಾಟೀಲ ಅವರಿಂದ ಸದನದ ಹಕ್ಕುಚ್ಯುತಿ ಆಗಿದೆ. ಅವರು ಹೇಳಿರುವ ಹೇಳಿಕೆ ವಿಡಿಯೊ ಇದೆ ನೋಡಿ’ ಎಂದು ನಾರಾಯಣಸ್ವಾಮಿ ಹೇಳಿದರು.

‘ಸಭಾಪತಿಯವರು ಆಡದಿರುವ ಮಾತನ್ನು ಅವರೇ ಹೇಳಿದ್ದಾರೆ ಎಂದು ಹೇಳಿರುವ ಕಾನೂನು ಸಚಿವರು ಸದನಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ಕ್ರಮವಾಗಬೇಕು ’ ಎಂದು ಜೆಡಿಎಸ್‌ನ ಎಲ್‌.ಎಸ್‌. ಭೋಜೇಗೌಡ ಆಗ್ರಹಿಸಿದರು.

‘ಸಚಿವರನ್ನು ಸದನಕ್ಕೆ ಕರೆಯಿಸಿ ಮಾಹಿತಿ ಪಡೆದುಕೊಳ್ಳಿ’ ಎಂದು ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ಹೇಳಿದರು. ‘ನಿಯಮದ ಪ್ರಕಾರ ನೋಡಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಭಾಪತಿ ಹೇಳಿದರು.

ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.