ADVERTISEMENT

ಕೆಪಿಎಸ್‌ಸಿ: ಸಂದೇಹಗಳಿದ್ದರೆ ತನಿಖೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 22:32 IST
Last Updated 12 ಮಾರ್ಚ್ 2020, 22:32 IST
 ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ‘2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯಪರೀಕ್ಷೆ ಡಿಜಿಟಲ್‌ ಮೌಲ್ಯಮಾಪನವನ್ನು ಹೊರಗುತ್ತಿಗೆ ನೀಡಿಲ್ಲ. ಈ ಬಗ್ಗೆ ಸಂದೇಹಗಳಿದ್ದರೆ ತನಿಖೆ ನಡೆಸಲು ಸಿದ್ಧ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಮುಖ್ಯಪರೀಕ್ಷೆಯ ತತ್ತ್ವಶಾಸ್ತ್ರ ಉತ್ತರ ಪತ್ರಿಕೆಗಳನ್ನು ತತ್ತ್ವಶಾಸ್ತ್ರ ವಿಷಯದ ಮೌಲ್ಯಮಾಪಕರಿಂದಲೇ ಮೌಲ್ಯಮಾಪನ ಮಾಡಿಸಲಾಗಿದೆ ಎಂದು ನೇಮಕಾತಿ ಪ್ರಾಧಿಕಾರವಾದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವರದಿ ನೀಡಿದೆ’ ಎಂದರು.

ರಮೇಶ್‌ ಮಾತನಾಡಿ, ‘ಮೌಲ್ಯಮಾಪನದ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಕೆಪಿಎಸ್‌ಸಿ, ಹೊರಗುತ್ತಿಗೆ ಮೂಲಕ ಮೌಲ್ಯಮಾಪನ ನೆರವೇರಿಸಲಾಗಿದೆ ಎಂದು ಉತ್ತರಿಸಿದೆ. ಖಾಸಗಿ ಸಂಸ್ಥೆಯೊಂದು ಮಾಡಿದ ಮೌಲ್ಯಮಾಪನ ಆಧರಿಸಿ ಕೆಪಿಎಸ್‌ಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸರ್ಕಾರಿ ಸೇವೆಗೆ ನೇಮಿಸುವುದು ಎಷ್ಟು ಸರಿ. ಇನ್ನೊಂದು ಪ್ರಶ್ನೆಗೆ ಮೌಲ್ಯಮಾಪನವು ಸೂಕ್ಷ್ಮ, ಗೌಪ್ಯ ವಿಷಯ ಎಂದೂ ಹೇಳಿದೆ. ಆ ಮೂಲಕ ಗೊಂದಲ ಉಂಟು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಮೇಶ್‌ ಅವರ ಮಾತಿಗೆ ಕಾಂಗ್ರೆಸ್ಸಿನ ಶರಣಪ್ಪ ಮಟ್ಟೂರ ಮತ್ತು ಎಚ್‌.ಎಂ. ರೇವಣ್ಣ ಕೂಡಾ ಧ್ವನಿಗೂಡಿಸಿದರು. ಆಗ ಮುಖ್ಯಮಂತ್ರಿ, ‘ಕೆಪಿಎಸ್‌ಸಿ ನೀಡಿರುವ ಮಾಹಿತಿಯನ್ನು ಸದನಕ್ಕೆ ನೀಡಿದ್ದೇನೆ. ಒಂದು ವೇಳೆ ಹೊರಗುತ್ತಿಗೆ ಮೂಲಕ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿಸಿದ್ದರೆ, ಸೂಕ್ತ ತನಿಖೆಗೆ ಸೂಚಿಸುತ್ತೇನೆ. ಈ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ತಪ್ಪು ಎಸಗಿದ್ದರೆ ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.