ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ನಕಲಿ ಔಷಧ ತಯಾರಿಕೆ ಕಂಪನಿಗಳು ಹಾಗೂ ಮಾರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಕಾನೂನು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಾಂಗ್ರೆಸ್‌ನ ಎಸ್. ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಕಲಿ ಔಷಧ ಮಾರಾಟ ಮಾಡುತ್ತಿರುವ 21 ಪ್ರಕರಣಗಳು ಗಮನಕ್ಕೆ ಬಂದಿದ್ದು, ವಿವಿಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಮೂರು ವರ್ಷಗಳಲ್ಲಿ 20 ನಕಲಿ ಔಷಧ ತಯಾರಕ ಕಂಪನಿಗಳು ಹಾಗೂ ಒಬ್ಬರು ಔಷಧ ಮಾರಾಟಗಾರರ ಮೇಲೆ ಮೊಕದ್ದಮೆ ಹೂಡಲಾಗಿದೆ’ ಎಂದರು.
‘ಕಳಪೆ ಗುಣಮಟ್ಟದ ಔಷಧ ತಯಾರಿಸಿದ ಕಂಪನಿಗಳ ವಿರುದ್ಧ 1,001 ಪ್ರಕರಣ ದಾಖಲಿಸಿದ್ದು, 126 ಪ್ರಕರಣ ವಿಚಾರಣೆ ಹಂತದಲ್ಲಿದೆ. ಆದರೆ, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಹೀಗಾಗಿ, ಇಂತಹ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಶೇಷ ನ್ಯಾಯಾಲಯ ಸ್ಥಾಪಿಸುವ ಅಗತ್ಯವಿದೆ’ ಎಂದರು.
‘170 ಹುದ್ದೆ ಮಂಜೂರಾತಿಗೆ ಪ್ರಸ್ತಾವ’
ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ 170 ಹುದ್ದೆ ಮಂಜೂರಾತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಾಧಿಕಾರದಲ್ಲಿ 2017ರಲ್ಲಿ 382 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಆರೋಗ್ಯ ಇಲಾಖೆಯಿಂದ 130 ಅಧಿಕಾರಿಗಳು ಎರವಲು ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರವಲು ಮಾಡಿದ್ದ 27 ತಜ್ಞ ವೈದ್ಯರ ಪೈಕಿ 18 ಮಂದಿಯ ಎರವಲು ಸೇವೆ ರದ್ದುಗೊಳಿಸಿ ಆದೇಶಿಸಲಾಗಿದೆ. ಇದನ್ನು ಪ್ರಶ್ನಿಸಿ ಕೆಲವರು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದು, ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ
–ಜೆಡಿಎಸ್‌ನ ಟಿ.ಎ. ಶರವಣ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರ
‘ಬಾಕಿ ಹೊರೆ ವರ್ಗಾಯಿಸಲು ಚಿಂತನೆ’
ಮೂಲ ವಿಶ್ವವಿದ್ಯಾಲಯಗಳ ಬಾಕಿ ಹೊರೆಯನ್ನು ವಿಭಜಿತ ವಿಶ್ವವಿದ್ಯಾಲಯಗಳಿಗೆ ವರ್ಗಾಯಿಸಲು ಚಿಂತನೆ ನಡೆಸಲಾಗಿದೆ. ವಿಶ್ವವಿದ್ಯಾಲಯಗಳು ವಿಭಜನೆಯಾದ ಸಂದರ್ಭದಲ್ಲೇ ಬಾಕಿ ಹೊಣೆಗಾರಿಕೆ ಹಂಚಿಕೆ ಆಗಬೇಕಿತ್ತು. ಮೂಲ ವಿಶ್ವವಿದ್ಯಾಲಯಗಳ ಮೇಲೆ ಬಾಕಿಯ ಹೊರೆ ಬಿದ್ದಿದೆ
–ಬಿಜೆಪಿಯ ಎಸ್.ವಿ. ಸಂಕನೂರ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಉತ್ತರ.
‘ಗಡಿಪಾರು ನಿಯಮ ಸಡಿಲಿಸಲು ಕೇಂದ್ರಕ್ಕೆ ಮನವಿ’
ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿಪಾರು ನಿಯಮ ಇನ್ನಷ್ಟು ಸರಳೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಒಮ್ಮೆ ವ್ಯಕ್ತಿ ವಿರುದ್ದ ಅಪರಾಧ ಪ್ರಕರಣ ದಾಖಲಾದರೆ, ಆ ಪ್ರಕರಣ ಇತ್ಯರ್ಥ ಆಗುವವರೆಗೂ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. ವಿದೇಶಿಯರು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
–ಬಿಜೆಪಿಯ ಪಿ.ಎಚ್. ಪೂಜಾರ್ ಪ್ರಶ್ನೆಗೆ ಗೃಹ ಸಚಿವ ಜಿ. ಪರಮೇಶ್ವರ ಉತ್ತರ
‘ಯುವನಿಧಿ ನೀಡಲು ಸರ್ಕಾರ ಬದ್ಧ’
ಪಂಚ ಗ್ಯಾರಂಟಿಗಳಲ್ಲೊಂದಾದ ಯುವನಿಧಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಕೋರಿ 2,62,207 ಮಂದಿ ಅರ್ಜಿ ಸಲ್ಲಿಸಿದ್ದು, 1,74,170 ಫಲಾನುಭವಿಗಳಿಗೆ ಭತ್ಯೆ ನೀಡಲಾಗುತ್ತಿದೆ
–ಬಿಜೆಪಿಯ ಡಿ.ಎಸ್. ಅರುಣ್ ಪ್ರಶ್ನೆಗೆ ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಉತ್ತರ
‘ದೈಹಿಕ ಶಿಕ್ಷಕರಿಗೆ ಮುಂಬಡ್ತಿ ಅಸಾಧ್ಯ’
ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಮುಖ್ಯ ಶಿಕ್ಷಕ ಹುದ್ದೆಯ ಬಡ್ತಿಗೆ ಪದವಿ ಜತೆಗೆ ಬಿ.ಇಡಿ ಪದವಿ ನಿಗದಿಪಡಿಸಲಾಗಿದೆ. ಆದರೆ, ದೈಹಿಕ ಶಿಕ್ಷಣ ಶಿಕ್ಷಕರು ಬಿ.ಇಡಿ ಪದವಿ ಹೊಂದಿರುವುದಿಲ್ಲ. ಆದರೂ ಈ ಬಗ್ಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು
–ಕಾಂಗ್ರೆಸ್‌ನ ರಾಮೋಜಿಗೌಡ ಪ್ರಶ್ನೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.