ADVERTISEMENT

ಪುಸ್ತಕ ಮೇಳ | ಶಾಸಕರಿಗೆ ಅವಕಾಶ: ಯು.ಟಿ. ಖಾದರ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 14:36 IST
Last Updated 24 ಫೆಬ್ರುವರಿ 2025, 14:36 IST
ಯು.ಟಿ. ಖಾದರ್ 
ಯು.ಟಿ. ಖಾದರ್    

ಬೆಂಗಳೂರು: ‘ವಿಧಾನಸಭೆ ಸಚಿವಾಲಯದ ವತಿಯಿಂದ ವಿಧಾನಸೌಧದ ಆವರಣದಲ್ಲಿ ಇದೇ 27ರಿಂದ ಮಾರ್ಚ್ 3ರವರೆಗೆ ಆಯೋಜಿಸಲಾಗಿರುವ ‘ಪುಸ್ತಕ ಮೇಳ’ದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿನ ಅನುದಾನದಲ್ಲಿ ₹ 2 ಲಕ್ಷ ಮಿತಿಯೊಳಗೆ ಪುಸ್ತಕಗಳನ್ನು ಖರೀದಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಸ್ತಕ ಮೇಳವನ್ನು 27ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಸಚಿವರು, ಸಾಹಿತಿಗಳು ಭಾಗವಹಿಸಲಿದ್ದಾರೆ’ ಎಂದರು.

‘ವಿಧಾನಸೌಧದ ಆವರಣದಲ್ಲಿ 28ರಿಂದ ಮಾರ್ಚ್‌ 2ರವರೆಗೆ ಪ್ರತಿದಿನ ಎರಡು ವೇದಿಕೆಗಳಲ್ಲಿ ವಿವಿಧ ವಿಷಯಗಳ ಸಂವಾದ ಕಾರ್ಯಕ್ರಮಗಳು, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೂ ಅವಕಾಶ ಮಾಡಿಕೊಡಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು’ ಎಂದರು.

ADVERTISEMENT

‘216ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ಬೇಡಿಕೆಯಿದೆ. 150 ಮಳಿಗೆ ತೆರೆಯಲು ಮಾತ್ರ ಅವಕಾಶವಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 3ರಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪುಸ್ತಕ ಮೇಳ ವೀಕ್ಷಿಸಲಿದ್ದಾರೆ. ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಮೇಳದಲ್ಲಿ ಭಾಗವಹಿಸಲಿದ್ದಾರೆ’ ಎಂದೂ ತಿಳಿಸಿದರು.

‘ಪುಸ್ತಕ ಮಳಿಗೆ ತೆರೆಯಲು ರಾಜ್ಯ, ಹೊರರಾಜ್ಯ, ಅಂತರರಾಷ್ಟ್ರೀಯ ಮಟ್ಟದ ಪ್ರಕಾಶಕರು ಅವಕಾಶ ಕೋರಿದ್ದಾರೆ. ರಿಯಾಯಿತಿ ದರದಲ್ಲಿ ಪುಸ್ತಕಗಳು ಲಭ್ಯವಾಗಲಿದೆ. ಮೇಳದ ಅಂಗವಾಗಿ ಐದು ಮಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು’ ಎಂ‌ದರು.

‘ಪ್ರತಿ ದಿನ ಸಂಜೆ 5 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್‌ 2ರಂದು ಸಾಧುಕೋಕಿಲ ಅವರಿಂದ ಸಂಗೀತ ರಸಸಂಜೆ ಆಯೋಜಿಸಲಾಗಿದೆ’ ಎಂದೂ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.