
ಬೆಂಗಳೂರು: ‘ವಿಜಯಪುರ ವಿಮಾನನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ನಿವಾರಣೆಯಾಗಿದ್ದು, ಯುಗಾದಿ ವೇಳೆಗೆ ಕಾರ್ಯಾರಂಭ ಮಾಡುವ ವಿಶ್ವಾಸವಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಸಾರ್ವಜನಿಕ ಮಹತ್ವದ ಯೋಜನೆಗಳಿಗೆ ಪೂರ್ವಾನ್ವಯವಾಗುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮೋದನೆಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಇದೇ ವರ್ಷದ ಮೇ ತಿಂಗಳಿನಲ್ಲಿ ನೀಡಿದ್ದ ಆದೇಶವನ್ನು ಹಿಂಪಡೆದಿದೆ. ಇದರಿಂದ ವಿಜಯಪುರ ವಿಮಾನನಿಲ್ದಾಣದ ಸಮಸ್ಯೆಗಳು ಮುಗಿದಿವೆ ಎಂದಿದ್ದಾರೆ.
‘ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿತ್ತು. ಪರಿಸರ ಸಂಬಂಧಿತ ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಾರಣ ಪ್ರಕ್ರಿಯೆಗಳು ಸ್ಥಗಿತವಾಗಿದ್ದವು. ಸುಪ್ರೀಂಕೋರ್ಟ್ ನಿರ್ಧಾರದಿಂದ ಒಂದು ಹೆಜ್ಜೆ ಮುಂದಕ್ಕೆ ಬಂದಿದ್ದೇವೆ. ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ’ ಎಂದಿದ್ದಾರೆ.
‘ಸುಪ್ರೀಂ ಕೋರ್ಟ್ ಹಿಂದೆ ನೀಡಿದ್ದ ತೀರ್ಪಿನಿಂದ ವಿಮಾನನಿಲ್ದಾಣದ ಅಸ್ತಿತ್ವಕ್ಕೆ ಅಪಾಯ ಎದುರಾಗಿತ್ತು. ಆದರೆ, ಸಚಿವ ಎಂ.ಬಿ. ಪಾಟೀಲರು ಕಪಿಲ್ ಸಿಬಲ್ ಅವರಂಥ ಹಿರಿಯ ವಕೀಲರನ್ನು ನೇಮಿಸಿಕೊಳ್ಳುವ ಮೂಲಕ ನೆರವಾದರು’ ಎಂದು ವಿಜಯಪುರ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.