ಬೆಂಗಳೂರು: ‘ಚುನಾವಣಾ ಅಕ್ರಮ ನಡೆದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಿತ್ತೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ತಮ್ಮ ಸಹೋದರ ಡಿ.ಕೆ.ಸುರೇಶ್ ಚುನಾವಣಾ ಅಕ್ರಮದಿಂದ ಸೋತಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದಕ್ಕಾಗಿ ಶಿವಕುಮಾರ್ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ರಾಹುಲ್ ಗಾಂಧಿ ಮತ್ತಿತರರು ಇಂಥ ಸಾಂವಿಧಾನಿಕ ಸಂಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಚುನಾವಣಾ ಆಯೋಗಕ್ಕೆ ಮಾಡುವ ಅಪಮಾನ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ನಡೆಯೂ ಹೌದು ಎಂದು ಹೇಳಿದರು.
‘ಕೇಂದ್ರ ಸರ್ಕಾರ, ನರೇಂದ್ರ ಮೋದಿಯವರು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಲು ಸಾಧ್ಯವಿತ್ತೇ? ಈಚೆಗೆ ನಡೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ನವರು ಗೆದ್ದರಲ್ಲವೇ, ಆಗ ಚುನಾವಣಾ ಆಯೋಗದಿಂದ ದುರ್ಬಳಕೆ ಆಗಿಲ್ಲವೇ’ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಚುನಾವಣಾ ಆಯೋಗದ ಕುರಿತಂತೆ ರಾಹುಲ್‌ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಅಪಾಯಕಾರಿ ಬೆಳವಣಿಗೆ. ಕಾಂಗ್ರೆಸ್ ನಾಯಕರ ತುರ್ತುಪರಿಸ್ಥಿತಿಯ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಎಂದು ಟೀಕಿಸಿದರು.
ರಾಜ್ಯದ ಹಿತ ಬಲಿ ಕೊಡುವುದಿಲ್ಲ:
‘ಮಹದಾಯಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸದಾ ರಾಜ್ಯದೊಂದಿಗೆ ಇರುತ್ತದೆ. ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಗಮನಿಸಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆಯನ್ನೂ ಗಮನಿಸಬೇಕು. ಕರ್ನಾಟಕ ಹಿತ ಬಲಿ ಕೊಡಲು ಅವಕಾಶ ನೀಡುವುದಿಲ್ಲ’ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು 4,078 ದಿನಗಳ ಆಡಳಿತ ನಡೆಸಿದ್ದಾರೆ. ಜವಾಹರಲಾಲ್ ನೆಹರೂ ನಂತರ ಅತಿ ಹೆಚ್ಚು ದಿನಗಳ ಕಾಲ ದೇಶವನ್ನು ಮುನ್ನಡೆಸಿದ ಎರಡನೇ ಪ್ರಧಾನಿ ಆಗಿ ಹೊರ ಹೊಮ್ಮಿದ್ದಾರೆ. ಇದೊಂದು ದಾಖಲೆ ಎಂದರು.
‘ಕೃಷ್ಣರಾಜ ಒಡೆಯರ್ ಜತೆ ಹೋಲಿಕೆಯೇ ಹಾಸ್ಯಾಸ್ಪದ’
‘ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯ ಮೇಲಿನ ಅಪಾರ ಅಭಿಮಾನದಿಂದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆ ಹೋಲಿಕೆ ಮಾಡಿದ್ದಾರೆ. ಇದು ಹಾಸ್ಯಾಸ್ಪದ ಅಸಂಬದ್ಧ ಮತ್ತು ಒಡೆಯರ್‌ಗೆ ಮಾಡಿದ ಘೋರ ಅಪಮಾನ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ. ‘ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಮೈಸೂರು ರಾಜಮನೆತನದ ಬಗ್ಗೆ ಗೌರವ ಇದ್ದರೆ ಈ ಕೂಡಲೇ ಅಸಂಬದ್ಧ ಹೇಳಿಕೆಯನ್ನು ವಾಪಸ್ ಪಡೆದು ನಾಡಿನ ಜನತೆ ಬಳಿ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದ್ದಾರೆ. ‘ನಾಲ್ವಡಿ ಭೂಪ ಮನೆ ಮನೆ ದೀಪ ಎಂದು ಶತಮಾನದ ನಂತರವೂ ಕನ್ನಡಿಗರು ದಿನನಿತ್ಯ ನೆನೆದುಕೊಳ್ಳುವ ರೀತಿ ಜನ ಮನ್ನಣೆ ಗಳಿಸಿದ್ದ ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲಿ ಅಭಿವೃದ್ಧಿ ಶೂನ್ಯ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ’ ಎಂದು ಪ್ರಶ್ನಿಸಿದ್ದಾರೆ. ‘ಶತಮಾನದ ಹಿಂದೆಯೇ ಮೈಸೂರು ವಿಶ್ವವಿದ್ಯಾಲಯ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ ಅನುದಾನ ಕೊಡಲಾಗದೇ 9 ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವ ಸಿದ್ದರಾಮಯ್ಯ ಅವರೆಲ್ಲಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.