ADVERTISEMENT

ಯೋಗೇಶಗೌಡ ಹತ್ಯೆ: ಸಿಬಿಐಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ತನಿಖೆಯ ಸಿಂಧುತ್ವ ಪ್ರಶ್ನಿಸಿದ್ದ ವಿನಯ್‌ ಕುಲಕರ್ಣಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 19:46 IST
Last Updated 8 ಜುಲೈ 2021, 19:46 IST
ಯೋಗೇಶಗೌಡ
ಯೋಗೇಶಗೌಡ    

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಿ ಹೊರಡಿಸಲಾದ ಆದೇಶದ ಸಿಂಧುತ್ವ ಪ್ರಶ್ನಿಸಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ಸಿಬಿಐಗೆ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣ ಕುರಿತು ಎರಡನೇ ಎಫ್‌ಐಆರ್‌ ದಾಖಲಿಸಿರುವ ಸಿಬಿಐ ಕ್ರಮವನ್ನು ಪ್ರಶ್ನಿಸಿ ಚಂದ್ರಶೇಖರ ಇಂಡಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ಜುಲೈ 24ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಮೂರ್ತಿ ಯು.ಯು. ಲಲಿತ್‌ ನೇತೃತ್ವದ ಪೀಠ ಜಾರಿ ಮಾಡಿರುವ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಪೊಲೀಸರು ಬಂಧಿಸಿದ್ದ ಆರೋಪಿಗಳು ಹಾಗೂ ನಂತರ ಸಿಬಿಐ ಬಂಧಿಸಿರುವ ಪ್ರಮುಖ ಆರೋಪಿಗಳೆಲ್ಲರಿಗೂ ಜಾಮೀನು ನೀಡಲಾಗಿದೆ. ಆದರೆ, ಅರ್ಜಿದಾರರಿಗೆ ಮಾತ್ರ ಜಾಮೀನು ನೀಡದಿರುವುದು ಏಕೆ’ ಎಂದು ವಿನಯ್‌ ಪರ ವಕೀಲ ಮುಕುಲ್‌ ರೋಹಟ್ಗಿ ವಾದ ಮಂಡಿಸಿದರು.

ADVERTISEMENT

ಪ್ರಮುಖ ಆರೋಪಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಘಟನೆ ನಡೆದ ದಿನ ಆರೋಪಿ ವಿನಯ್‌ ಕುಲಕರ್ಣಿ ಅವರಿಗೆ ಕರೆ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ ಸಿಬಿಐ ಪರ ವಕೀಲ ತುಷಾರ್‌ ಮೆಹ್ತಾ, ಆರೋಪಿ ಸಲ್ಲಿಸಿರುವ ಅರ್ಜಿಯ ಮಾನ್ಯತೆಯನ್ನು ಪ್ರಶ್ನಿಸಿದರು.

ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಅವಕಾಶ ನೀಡಿದ ಪೀಠ, ಮುಂದಿನ ವಿಚಾರಣೆಯನ್ನು ಜುಲೈ 26ಕ್ಕೆ ನಿಗದಿಪಡಿಸಿತು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ರದ್ದುಪಡಿಸಿ 2019ರ ನವೆಂಬರ್‌ 21ರಂದು ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್‌ 2020ರ ಫೆಬ್ರುವರಿ 21ರಂದು ಆ ಆದೇಶಕ್ಕೆ ತಡೆ ನೀಡಿತ್ತು.

ಜಾಮೀನು ಕೋರಿ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್‌ ನೀಡಿದ ಆದೇಶವನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.